ನೀರವ್ ಮೋದಿ ಹಾಂಗ್‌ಕಾಂಗ್‌ನಲ್ಲಿರಬಹುದು: ಜಾರಿ ನಿರ್ದೇಶನಾಲಯ

ಮುಂಬೈ, ಮಾ.4: 12,600 ಕೋಟಿ ರೂ. ಮೊತ್ತದ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಣ ವಂಚನೆ ಆರೋಪ ಎದುರಿಸುತ್ತಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಹಾಂಗ್‌ಕಾಂಗ್‌ನಲ್ಲಿರುವ ಸಾಧ್ಯತೆಯಿದೆ ಎಂದು ಜಾರಿ ನಿರ್ದೇಶನಾಲಯವು ಹಣ ವಂಚನಾ ತಡೆ ಕಾಯ್ದೆ ವಿಶೇಷ ನ್ಯಾಯಾಲಯಕ್ಕೆ ಶನಿವಾರ ತಿಳಿಸಿದೆ. ಆರೋಪಿ ವಿರುದ್ಧ ಜಾಮೀನುರಹಿತ ವಾರಂಟ್‌ಗೆ ಮನವಿ ಮಾಡಿರುವ ಜಾರಿ ನಿರ್ದೇಶನಾಲಯ ಈ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದೆ. ವಿಶೇಷ ನ್ಯಾಯಾಧೀಶ ಎಂ.ಎಸ್ ಅಝ್ಮಿ, ಆರೋಪಿ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿ ಆದೇಶ ನೀಡಿದ್ದಾರೆ.
ತನಿಖಾ ಸಂಸ್ಥೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದರೂ ಆರೋಪಿಗಳು ವಿಚಾರಣೆಗೆ ಹಾಜರಾಗಿಲ್ಲ ಎಂದು ಜಾರಿ ನಿರ್ದೇಶನಾಲಯದ ವಿಶೇಷ ವಕೀಲ ಹಿತೇನ್ ವೆನೆಗಾಂವ್ಕರ್ ನ್ಯಾಯಾಲಯದಲ್ಲಿ ವಾದಿಸಿದ್ದರು. ನ್ಯಾಯಾಲಯವು ಆರೋಪಿಗಳ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿ ಮಾಡಿರುವುದರಿಂದ ಅವರನ್ನು ಭಾರತಕ್ಕೆ ಮರಳಿ ತರಲು ನೆರವಾಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯವು ಕಳೆದ ಫೆಬ್ರವರಿ 15ರಂದು ಮೊದಲ ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಇದಾದ ನಂತರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಫೆಬ್ರವರಿ 17 ಮತ್ತು 22ರಂದು ಇಮೇಲ್ ಮೂಲಕ ಸಮನ್ಸ್ ಕಳುಹಿಸಲಾಯಿತು. ಇದಕ್ಕೂ ಆರೋಪಿಗಳು ಪ್ರತಿಕ್ರಿಯಿಸಲಿಲ್ಲ. ಹಾಗಾಗಿ ನ್ಯಾಯಾಲಯದ ಸೂಚನೆಯ ಹೊರತು ಆರೋಪಿಗಳು ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿಲ್ಲ ಎಂದು ವೆನೆಗಾಂವ್ಕರ್ ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ.
ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ಇಮೇಲ್ ಮೂಲಕ ಉತ್ತರಿಸಿರುವ ನೀರವ್ ಮೋದಿ, ತಾನು ವಿದೇಶದಲ್ಲಿ ವ್ಯವಹಾರದಲ್ಲಿ ವ್ಯಸ್ತವಾಗಿದ್ದು ಕೇವಲ ಇಮೇಲ್ ಮೂಲಕ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದರು. ವಿವಿಧ ತನಿಖಾ ಸಂಸ್ಥೆಗಳು ವಿಚಾರಣೆಯ ಹೆಸರಲ್ಲಿ ತನ್ನ ಸುರಕ್ಷತೆ, ಘನತೆ ಮತ್ತು ಆಸ್ತಿಗಳಿಗೆ ಹಾನಿ ಮಾಡಿದ್ದಾರೆ. ಹಾಗಾಗಿ ನನಗೆ ವೈಯಕ್ತಿಕ ಸುರಕ್ಷತೆಯ ಭಯವೂ ಇದೆ ಎಂದು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಮತ್ತೊಂದೆಡೆ ಮೆಹುಲ್ ಚೋಕ್ಸಿ, ನಾನು ಭಾರತಕ್ಕೆ ಮರಳಲು ಬಯಸುತ್ತೇನೆ. ಆದರೆ ನನ್ನ ಪಾಸ್‌ಪೋರ್ಟ್ ರದ್ದು ಮಾಡಲಾಗಿದೆ ಎಂದು ತಿಳಿಸಿರುವುದಾಗಿ ವರದಿಗಳು ತಿಳಿಸಿವೆ.







