ಯಡಿಯೂರಪ್ಪ ಅವರನ್ನು ಬಿಜೆಪಿ ಎಂದೂ ಮುಖ್ಯಮಂತ್ರಿ ಮಾಡುವುದಿಲ್ಲ: ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು
ಮೈಸೂರು,ಮಾ.4: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಮಾಡುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ತಲೆಯಲ್ಲಿ ಅನಂತಕುಮಾರ್ ಹೆಗಡೆಯನ್ನು ಮುಖ್ಯಮಂತ್ರಿ ಮಾಡುವ ಯೋಜನೆ ಇದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಹಾಗೂ ಸಂವಹ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ವಿಚಾರವೇದಿಕೆ ವತಿಯಿಂದ ರವಿವಾರ ಜೆಎಲ್‍ಬಿ ರಸ್ತೆಯಲ್ಲಿರುವ ಇನ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಏರ್ಪಡಿಸಿದ್ದ 'ಹಿಂದುತ್ವ ವರ್ಸಸ್ ಭಾರತೀಯ ಸಂವಿಧಾನ' ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನ ಇರುವುದರಿಂದ ಟೀ ಮಾರುತಿದ್ದ ನಾನು ಈ ದೇಶದ ಪ್ರಧಾನಿಯಾಗಿದ್ದೇನೆ ಎಂದು ಹೇಳುವ ನರೇಂದ್ರ ಮೋದಿ, ಈಗ ಸಂವಿಧಾನವನ್ನೇ ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ಮೋದಿ ಹಾಗೂ ಅಮಿತ್ ಶಾ ಕಂಪನಿ ದೇಶವನ್ನು ಹಿಂದುತ್ವ ಹೆಸರಿನಲ್ಲಿ ಒಡೆದು ಆಳುತ್ತಿದ್ದಾರೆ ಎಂದು ಆರೋಪಿಸಿದರು.
ದೇಶದಲ್ಲಿ ಉದ್ಯೋಗವಿಲ್ಲದೆ ಯುವಕರು ಪರದಾಡುತ್ತಿದ್ದಾರೆ. ಇದರ ಬಗ್ಗೆ ಪ್ರಧಾನಿ ಮೋದಿಗೆ ಕಾಳಜಿ ಇದೆಯಾ? ಕೃಷಿಕರ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ರೈತರ ಕಷ್ಟವನ್ನು ಹತ್ತಿರದಿಂದ ನೋಡಿದ್ದಾರಾ? ಸುಳ್ಳು ಹೇಳುವುದೇ ಇವರ ಧರ್ಮವಾಗಿದೆ. ಏನನ್ನು ಪ್ರಶ್ನೆ ಮಾಡದೇ ಸುಮ್ಮನೇ ಇರುವವರು ದೇಶ ದ್ರೋಹಿಗಳು. ನಮ್ಮ ವಿವಿಯಲ್ಲಿ ಸುಮ್ಮನೆ ಇರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇವರೇ ನಿಜವಾದ ದ್ರೋಹಿಗಳು. ಪ್ರಶ್ನೆ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡಿಲ್ಲವೆಂದು ಕಿಡಿಕಾರಿದರು.
ಹಲವಾರು ಮಂದಿ ನನಗೆ ಭದ್ರತೆ ತೆಗೆದುಕೊಳ್ಳಿ ಏಂದು ಸಲಹೆ ನೀಡಿದ್ದಾರೆ. ಆದರೆ ನಾನು ಎಂದಿಗೂ ಭದ್ರತೆ ತೆಗೆದುಕೊಳ್ಳುವುದಿಲ್ಲ. ನನ್ನನ್ನು ಕೊಂದವರು ವಿಲನ್ ಆಗುತ್ತಾರೆ. ನಾನು ಹೀರೋ ಆಗುತ್ತೇನೆ, ಸತ್ತ ಮೇಲೆ ನಾನು ಬದುಕುತ್ತೇನೆ ಎಂದರು.







