ಪೊಲೀಸರು ಅನುಸರಿಸಬೇಕಾದ ಕ್ರಮಗಳ ಕುರಿತು ಹೈಕೋರ್ಟ್ ಮಾರ್ಗಸೂಚಿ
ಮರಳು ಸೇರಿ ಇತರೆ ಖನಿಜಗಳ ಕಳ್ಳತನ ಪ್ರಕರಣ

ಬೆಂಗಳೂರು, ಮಾ. 4: ಮರಳು ಸೇರಿದಂತೆ ಇತರೆ ಖನಿಜಗಳ ಕಳ್ಳತನ ಹಾಗೂ ಅಕ್ರಮ ಸಾಗಣೆ ಪ್ರಕರಣಗಳಲ್ಲಿ ಪೊಲೀಸರು ಅನುಸರಿಸಬೇಕಾದ ರೀತಿ ಹಾಗೂ ಅಧೀನ ನ್ಯಾಯಾಲಯಗಳು ವಿಚಾರಣೆ ನಡೆಸುವ ವಿಧಾನಗಳ ಕುರಿತು ರಾಜ್ಯ ಹೈಕೋರ್ಟ್ ಮಾರ್ಗಸೂಚಿ ರಚಿಸಿ ಮಹತ್ವದ ತೀರ್ಪು ನೀಡಿದೆ.
ಗಣಿ ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ಕಾಯ್ದೆ-1957(ಎಂಎಂಆರ್‌ಡಿ) ಮತ್ತು ಕರ್ನಾಟಕ ಗಣಿ ಮತ್ತು ಖನಿಜಗಳ ರಿಯಾಯಿತಿ ಅಧಿನಿಯಮ -1994(ಕೆಎಂಎಂಸಿಆರ್) ಅಡಿ ಖನಿಜಗಳ ಕಳ್ಳತನ ಬಗ್ಗೆ ದೂರು ದಾಖಲಿಸುವ ಹಾಗೂ ಅವುಗಳನ್ನು ವಿಚಾರಣೆ ನಡೆಸುವ ವಿಚಾರದಲ್ಲಿ ಪೊಲೀಸರು ಮತ್ತು ಅಧೀನ ನ್ಯಾಯಾಲಯಗಳು ಪದೇ ಪದೇ ಕಾನೂನಾತ್ಮಕ ಲೋಪ ಎಸಗುತ್ತಿದ್ದವು. ಇದರಿಂದಾಗಿ ಆರೋಪಿಗಳ ವಿರುದ್ಧದ ಪ್ರಕರಣ ರದ್ದುಪಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ ಈ ಮಾರ್ಗಸೂಚಿ ರಚಿಸಿದೆ. ಇನ್ನು ಮುಂದೆ ಎಂಎಂಆರ್‌ಡಿ ಕಾಯ್ದೆ ಹಾಗೂ ಕೆಎಂಎಂಸಿಆರ್ ಅಡಿ ದೂರು ದಾಖಲಿಸುವ ಪೊಲೀಸರು ಮತ್ತು ತನಿಖಾ ವರದಿ ಸ್ವೀಕರಿಸುವ ಅಧೀನ ನ್ಯಾಯಾಲಯಗಳು ಈ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ.
ಕುಣಿಗಲ್ ಕೇಸಲ್ಲಿ ಬಂದ ತೀರ್ಪು: ಮರಳು ಕಳ್ಳತನ ಹಾಗೂ ಅಕ್ರಮ ಸಾಗಣೆ ಆರೋಪದ ಸಂಬಂಧ ಕುಣಿಗಲ್ ಠಾಣಾ ಪೊಲೀಸರು ತಮ್ಮ ವಿರುದ್ಧ ಐಪಿಸಿ, ಕೆಎಂಎಂಸಿಆರ್, ಎಂಎಂಆರ್‌ಡಿ ಕಾಯ್ದೆ ಮತ್ತು ಭಾರತೀಯ ಮೋಟಾರು ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಸಲ್ಲಿಸಿದ್ದ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಲಾರಿಯೊಂದರ ಚಾಲಕ ವಿವೇಕ್ ಹಾಗೂ ಮಾಲಕ ಎಚ್.ಎನ್.ರುದ್ರೇಶ್ ಹೈಕೋರ್ಟ್‌ಗೆ ಹೋಗಿದ್ದರು. ದೋಷಾರೋಪ ಪಟ್ಟಿ ದಾಖಲು ಹಾಗೂ ಅಧೀನ ನ್ಯಾಯಾಲಯದ ವಿಚಾರಣೆಯಲ್ಲಿ ಆಗಿದ್ದ ಹಲವು ಕಾನೂನಾತ್ಮಕ ಲೋಪಗಳ ಕುರಿತು ಅರ್ಜಿದಾರರ ಪರ ವಕೀಲರು ಹೈಕೋರ್ಟ್ ಗಮನ ಸೆಳೆದಿದ್ದರು. ಇದರಿಂದ ಹೈಕೋರ್ಟ್ ಈ ಮಾಗರ್ಸೂಚಿಗಳನ್ನು ರಚಿಸಿದೆ.
ಮಾರ್ಗಸೂಚಿಗಳೇನು: ಎಂಎಂಆರ್‌ಡಿ ಕಾಯ್ದೆ ಮತ್ತು ಕೆಎಂಎಂಸಿಆರ್ ಅಧಿನಿಯಮಗಳಡಿಯ ಪ್ರಕರಣಗಳ ಕುರಿತು ವಿಶೇಷ ನ್ಯಾಯಾಲಯವು (ಎಂಎಂಆರ್‌ಡಿ ಕಾಯ್ದೆಯಡಿ ಸ್ಥಾಪಿತವಾದ) ನೇರವಾಗಿ ದೋಷಾರೋಪ ಪಟ್ಟಿ ಪಡೆದು, ಅದರ ಮೇಲೆ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸುವ ಪ್ರಕ್ರಿಯೆ (ಕಾಗ್ನಿಜೆನ್ಸ್) ಆರಂಭಿಸುವಂತಿಲ್ಲ.
ಕೇಂದ್ರ ಹಾಗೂ ರಾಜ್ಯ ಸರಕಾರದ ಸಕ್ಷಮ ಅಧಿಕಾರಿಯಿಂದ ಎಂಎಂಆರ್‌ಡಿ ಕಾಯ್ದೆಯಡಿ ದಾಖಲಿಸುವ ಖಾಸಗಿ ದೂರು ಅಥವಾ ತನಿಖಾ ವರದಿಯನ್ನು ನೇರವಾಗಿ ಸ್ವೀಕರಿಸುವುದಕ್ಕೆ ವಿಶೇಷ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊಂದಿಲ್ಲ. ಒಂದೊಮ್ಮೆ ತಪ್ಪಾಗಿ ದೂರು ಸ್ವೀಕರಿಸಿದರೆ ಅದನ್ನು ಸಂಬಂಧಪಟ್ಟ ಕೋರ್ಟ್‌ಗೆ ವರ್ಗಾಯಿಸಬೇಕು. ಭಾರತೀಯ ದಂಡ ಸಂಹಿತೆ ಹಾಗೂ ಇತರೆ ದಂಡಾರ್ಹ ಕಾನೂನುಗಳ ಜೊತೆಗೆ ಎಂಎಂಆರ್‌ಡಿ ಹಾಗೂ ಕೆಎಂಎಂಸಿಆರ್ ಗೆ ಸಂಬಂಧಿಸಿದ ಪ್ರಕರಣವನ್ನು ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊದಲು ವಿಚಾರಣೆಗೆ ಅಂಗೀಕರಿಸಬೇಕು.
ಎಂಎಂಆರ್‌ಡಿ ಕಾಯ್ದೆ ಮತ್ತು ಕೆಎಂಎಂಸಿಆರ್ ಗೆ ಸಂಬಂಧಿಸಿದ ಅಪರಾಧ ಕೃತ್ಯದ ಬಗ್ಗೆ ಪೊಲೀಸರು ತಮ್ಮ ತನಿಖೆಯ ಅಂತಿಮ ವರದಿಯನ್ನು ಸ್ಥಳೀಯ ಜೆಎಂಎಫ್‌ಸಿ ಅಥವಾ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಇಲ್ಲ. ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಸಲ್ಲಿಸಬೇಕು.
ಒಂದೊಮ್ಮೆ ವಿಶೇಷ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿದರೆ, ಅದು ಮಾತ್ರವೇ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮಾಡಬಹುದು.







