ಎಸ್‌ಬಿಐಯಿಂದ 3.3 ಕೋಟಿ ರೂ. ವಾಹನ ಸಾಲ ಪಡೆದು ಚಿತ್ರ ನಿರ್ಮಿಸಿದರು !

ಚೆನ್ನೈ, ಮಾ.4: ಕಾರುಗಳನ್ನು ಖರೀದಿಸುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್‌ನ ವೆಲಚೆರಿ ಶಾಖೆಯಿಂದ 3.3 ಕೋಟಿ ರೂ. ಸಾಲ ಪಡೆದು ಸಿನೆಮಾ ನಿರ್ಮಿಸಿದ್ದಾರೆ ಎಂಬ ಕಾರಣಕ್ಕೆ ಮದ್ರಾಸ್ ಉಚ್ಚ ನ್ಯಾಯಾಲಯವು ‘ಅರುವ ಸಂಡೈ’ ಎಂಬ ತಮಿಳು ಸಿನೆವಾದ ಬಿಡುಗಡೆಗೆ ತಡೆಯಾಜ್ಞೆ ವಿಧಿಸಿದೆ.
ಎಸ್‌ಬಿಐ ದಾಖಲಿಸಿದ ದೂರಿನ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ಸಿ.ವಿ ಕಾರ್ತಿಕೇಯನ್ ‘ಅರುವ ಸಂಡೈ’ ಸಿನೆಮಾದ ಬಿಡುಗಡೆಗೆ ತಡೆ ನೀಡಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 16ರವರೆಗೆ ಚಿತ್ರವನ್ನು ಬಿಡುಗಡೆ ಮಾಡದಂತೆ ನ್ಯಾಯಾಧೀಶರು ನಿರ್ಮಾಪಕರಾದ ವೈಟ್ ಸ್ಕ್ರೀನ್ ಪ್ರೊಡಕ್ಷನ್ಸ್‌ನ ರಾಜಾಗೆ ಸೂಚಿಸಿದ್ದಾರೆ.
ರಾಜಾ ಓರ್ವ ಕಬಡ್ಡಿ ಪಟುವಾಗಿದ್ದು ವಿವಾದಿತ ಸಿನೆಮಾದಲ್ಲಿ ಮಾಳವಿಕ ಮೆನನ್ ಜೊತೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬ್ಯಾಂಕ್ ದೂರಿನ ಪ್ರಕಾರ, ರಾಜಾ ಸಹಿತ ಹದಿಮೂರು ಮಂದಿ ಡಿ. ಚಿತ್ರ ಎಂಬ ವಾಹನ ಸಾಲ ಸಲಹೆಗಾರ್ತಿಯ ಮೂಲಕ ಕೆವೈಸಿ ಸೇರಿದಂತೆ ಎಲ್ಲ ಅಗತ್ಯ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸಿ ವಿವಿಧ ಕಾರುಗಳನ್ನು ಖರೀದಿಸುವುದಾಗಿ ತಿಳಿಸಿ 3.30 ಕೋಟಿ ರೂ. ಸಾಲ ಪಡೆದುಕೊಂಡಿದ್ದರು.
ಬ್ಯಾಂಕ್‌ಗೆ ನಕಲಿ ದಾಖಲೆಗಳು ಮತ್ತು ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಚಿತ್ರ ತಮ್ಮ ಕರ್ತವ್ಯಕ್ಕೆ ಮೋಸ ಮಾಡಿದ್ದಾರೆ. ಓರ್ವ ವಾಹನ ಸಾಲ ಸಲಹೆಗಾರ್ತಿಯಾಗಿ ಆಕೆ ಬ್ಯಾಂಕ್ ಅಧಿಕಾರಿಗಳ ವಿಶ್ವಾಸ ಗಳಿಸಿದ್ದರು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ. ಆಘಾತಕಾರಿ ಬೆಳವಣಿಗೆಯಲ್ಲಿ ಆಕೆ ಕೆಲವು ವಂಚಕ ವಿಧಾನಗಳನ್ನು ಬಳಸಿ ಕಂಪ್ಯೂಟರ್‌ಗಳಿಂದ ಅಧಿಕಾರಿಗಳ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಪಡೆಯಲು ಸಫಲರಾಗಿದ್ದರು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಚಿತ್ರ ಸೂಚಿಸಿರುವ ವ್ಯಕ್ತಿಗಳಿಗೆ ಸಾಲ ನೀಡುವಲ್ಲಿ ಕೆಲವೊಂದು ಅಸಮಂಜಸಗಳಿರುವುದು ಶಾಖೆಯ ವ್ಯವಸ್ಥಾಪಕರು ಗಮನಕ್ಕೆ ಬಂದಿದೆ. ಕೂಡಲೇ ಅವರು ಈ ವಿಷಯವನ್ನು ಮೇಲಿನ ಅಧಿಕಾರಿಗಳಿಗೆ ತಿಳಿಸಿದ್ದಾರೆ. ತನಿಖೆಯ ವೇಳೆ ಚಿತ್ರ ತಮ್ಮ ಪ್ರಭಾವ ಮತ್ತು ಅನುಭವವನ್ನು ಬಳಸಿ ಬ್ಯಾಂಕ್‌ನ ಲೋನ್ ಒರಿಜಿನೇಟಿಂಗ್ ಸಾಫ್ಟ್‌ವೇರ್‌ನ ಯುಆರ್ ಎಲ್ ನ್ನು ಕದ್ದು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಾರದಂತೆ ವಿಭಿನ್ನ ರೀತಿಯಲ್ಲಿ ಸಾಲಗಳನ್ನು ಪಡೆದುಕೊಂಡಿರುವುದು ಬಹಿರಂಗವಾಗಿತ್ತು. ಈ ಸಾಲಗಳನ್ನು ಕೇವಲ ಸಿನೆಮಾ ನಿರ್ಮಾಣಕ್ಕೆ ಬಳಸಲಾಗಿದೆ ಎಂಬ ಅಂಶವೂ ತನಿಖೆಯ ವೇಳೆ ತಿಳಿದುಬಂದಿತ್ತು.
ಸದ್ಯ ಎಲ್ಲ 13 ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಆದೇಶಿಸಿದೆ. ‘ಅರುವ ಸಂಡೈ’ ಸಿನೆಮಾದ ಮಾರಾಟ ಹಾಗೂ ಇತರ ಮೂಲಗಳಿಂದ ಬರುವ ಮೊತ್ತದ ಮೇಲೆ ಮೊದಲ ಹಕ್ಕು ತನ್ನದಾಗಿರುತ್ತದೆ ಎಂದು ಘೋಷಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ನ್ಯಾಯಾಲಯದಲ್ಲಿ ಮನವಿ ಮಾಡಿದೆ.







