ನಿದ್ದೆಯಲ್ಲಿ ಚಿರನಿದ್ರೆಗೆ ಜಾರಿದ ಇಟಲಿ ಫುಟ್ಬಾಲ್ ಆಟಗಾರ

ರೋಮ್, ಮಾ.4: ಇಟಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಆಟಗಾರ ಡೇವಿಡ್ ಅಸ್ಟೋರಿ ರವಿವಾರ ರಾತ್ರಿ ಹೊಟೇಲ್ ಕೊಠಡಿಯಲ್ಲಿ ನಿದ್ದೆಯಲ್ಲಿದ್ದಾಗಲೇ ಚಿರನಿದ್ದೆಗೆ ಜಾರಿದ್ದಾರೆ.
ಡಿಫೆಂಡರ್ ಡೇವಿಡ್‌ರ ಹಠಾತ್ ನಿಧನಕ್ಕೆ ಫಿಯೊರೆಂಟಿನಾ ಕ್ಲಬ್ ಆಘಾತ ವ್ಯಕ್ತಪಡಿಸಿದೆ. 31ರ ಹರೆಯದ ಡೇವಿಡ್ ಎರಡು ತಿಂಗಳ ಪುತ್ರಿಯನ್ನು ಅಗಲಿದ್ದಾರೆ. ಫಿಯೊರೆಂಟಿನಾ ಕ್ಲಬ್‌ನ ನಾಯಕನಾಗಿರುವ ಡೇವಿಡ್ ರವಿವಾರದ ಪಂದ್ಯಕ್ಕೆ ತಯಾರಿ ನಡೆಸಲು ಉಡಿನ್‌ನ ಹೊಟೇಲ್‌ನಲ್ಲಿ ತಂಗಿದ್ದರು.
ಸಾವಿಗೆ ಕಾರಣವೇನೆಂದು ಮರಣೋತ್ತರ ಪರೀಕ್ಷೆಯ ಬಳಿಕ ಗೊತ್ತಾಗಲಿದೆ ಎಂದು ಕ್ಲಬ್ ವಕ್ತಾರ ಹೇಳಿದ್ದಾರೆ.
ಡೇವಿಡ್ ರಾತ್ರಿ ವೇಳೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.
ಡೇವಿಡ್ ನಿಧನದ ಹಿನ್ನೆಲೆಯಲ್ಲಿ ರವಿವಾರದ ಜಿನೊವಾ ಹಾಗೂ ಕಾಗ್ಲಿಯರಿ ನಡುವಿನ ಪಂದ್ಯ ರದ್ದುಪಡಿಸಲಾಗಿದೆ.
ಸ್ಟೇಡಿಯಂನ ವಿಡಿಯೋ ಪರದೆಯಲ್ಲಿ ಅಸ್ಟೋರಿ ನಿಧನ ವಾರ್ತೆ ಪ್ರಸಾರ ಮಾಡಲಾಗಿದೆ.
ಎಸಿ ಮಿಲನ್ ಕ್ಲಬ್‌ನಲ್ಲಿ ಆಡುವ ಮೂಲಕ ಡೇವಿಡ್ ಅಸ್ಟೋರಿ ವೃತ್ತಿಜೀವನ ಆರಂಭಿಸಿದ್ದು, 2015ರಲ್ಲಿ ಫಿಯೊರೆಂಟಿನಾ ಕ್ಲಬ್‌ನ್ನು ಸೇರುವ ಮೊದಲು ಕಾಗ್ಲಿಯರಿ ಹಾಗೂ ರೋಮಾ ಕ್ಲಬ್‌ನಲ್ಲಿ ಆಡಿದ್ದರು. ಇಟಲಿಯ ಪರ 14 ಪಂದ್ಯಗಳಲ್ಲಿ ಆಡಿದ್ದರು.







