ಚಾಮರಾಜನಗರ: 42ಲಕ್ಷರೂ ವೆಚ್ಚದ ರಸ್ತೆ, ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ

ಚಾಮರಾಜನಗರ,ಮಾ.4: ರಸ್ತೆ ಅಭಿವೃದ್ದಿಯು ಗ್ರಾಮಾಂತರ ಪ್ರದೇಶದ ಜನರ ಜೀವನಾಡಿಯಾಗಿದ್ದು, ಈ ಮೂಲಕ ಸಂಪರ್ಕ, ಸಂವಹನ ಸಾಧ್ಯವಾಗಿ ದೇಶ ಅಭಿವೃದ್ದಿಯಾಗುತ್ತದೆಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು.
ಅವರು ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಆಯ್ಕೆಯಾದ ಹೆಗ್ಗವಾಡಿ, ಭುಜಗನಪುರ ಹಾಗೂ ಮುಕ್ಕಡಹಳ್ಳಿ ಗ್ರಾಮಗಳ ಪ.ಜಾತಿ ಬಡಾವಣೆಗಳ ಬೀದಿಗಳಲ್ಲಿ ಒಟ್ಟು 42ಲಕ್ಷರೂ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ, ಚರಂಡಿ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಒಂದು ಆದರ್ಶ ಗ್ರಾಮವು ನಿರ್ಮಾಣವಾಗಬೇಕಾದರೆ ಅಲ್ಲಿನ ನಾಗರೀಕರಿಗೆ ಮೂಲಭೂತವಾಗಿ ಕುಡಿಯುವ ನೀರು, ರಸ್ತೆ, ಚರಂಡಿ, ವಸತಿ, ಸಮುದಾಯಭವನಗಳು ಅಗತ್ಯವಾಗಿದ್ದು ರಸ್ತೆ ಅಭಿವೃದ್ದಿಯು ಗ್ರಾಮಾಂತರ ಪ್ರದೇಶದ ಜೀವನಾಡಿಯಾಗಿದೆ.ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳ ಆದರ್ಶ ಗ್ರಾಮಗಳ ಯೋಜನೆಯಡಿ ಮೂರು ಗ್ರಾಮಗಳಿಗೂ ತಲಾ 14 ಲಕ್ಷರೂ ವೆಚ್ಚದಲ್ಲಿ ಒಟ್ಟು 42ಲಕ್ಷರೂ ಅನುದಾನ ನೀಡಲಾಗಿದ್ದು, ಸುಸಜ್ಜಿತ ರಸ್ತೆ, ಚರಂಡಿ ನಿರ್ಮಿಸುವುದಾಗಿ ತಿಳಿಸಿದರು.
ಸರ್ಕಾರಗಳು ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಮೂಲಕ ಮಾದರಿ ಗ್ರಾಮಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದ ಅವರು, ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದು ಸಬಲರಾಗಬೇಕೆಂದು ತಿಳಿಸಿದರು.
ಉತ್ತಮ ಗುಣಮಟ್ಟದಿಂದ ಹಾಗೂ ಶೀಘ್ರವಾಗಿ ಕಾಮಗಾರಿ ನಿರ್ವಹಿಸುವಂತೆ ಸ್ಥಳದಲ್ಲಿದ್ದ ಗುತ್ತಿಗೆದಾರ ಹಾಗೂ ಇಂಜಿನಿಯರಿಗೆ ಸಂಸದರು ಸೂಚಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಅಧ್ಯಕ್ಷ ಎಚ್.ವಿ.ಚಂದ್ರು,ಜಿ.ಪಂ ಸದಸ್ಯ ಕೆರೆಹಳ್ಳಿ ನವೀನ್,ತಾ.ಪಂ ಸದಸ್ಯ ರೇವಣ್ಣ,ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ,ಮಾಜಿ ಅಧ್ಯಕ್ಷರಾದ ಕೆಂಪರಾಜು, ರಾಜ್‍ಕುಮಾರ್, ಸದಸ್ಯರಾದ ಬಿ.ನಂದೀಶ್, ಭಾಸ್ಕರ್, ಮುಖಂಡರಾದ ರವಿಕುಮಾಶರ್, ರೇವಣ್ಣ, ಇಂಜಿನಿಯರ್ ಚಿಕ್ಕಲಿಂಗಯ್ಯ, ಪಿಡಿಓ ನಾಗರಾಜು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.







