ಉಡುಪಿ: ಶ್ರೀಚೈತನ್ಯ ಸಂಭ್ರಮೋತ್ಸವ ಉದ್ಘಾಟನೆ

ಉಡುಪಿ, ಮಾ.4: ಪಶ್ಚಿಮ ಬಂಗಾಳ, ಒರಿಸ್ಸಾಗಳಲ್ಲಿ ಹಿಂದೂ ಧರ್ಮವನ್ನು ವ್ಯವಸ್ಥಿತವಾಗಿ ನಾಶ ಮಾಡಿ ಅವನತಿಯ ಹಂತದಲ್ಲಿದ್ದಾಗ ಚೈತನ್ಯ ಮಹಾಪ್ರಭು ಅಲ್ಲಿನ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ನಿಂತು ಧರ್ಮ ಜಾಗೃತಿ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ಹರಡಿ ಹಿಂದೂ ಧರ್ಮದ ಅಸ್ತಿತ್ವಕ್ಕೆ ನೇರವಾಗಿ ಕಾರಣರಾದರು ಎಂದು ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಪರ್ಯಾಯ ಪಲಿಮಾರು ಮಠ ಮತ್ತು ಬೆಂಗಳೂರು ಇಸ್ಕಾನ್ ಜಂಟಿ ಆಶ್ರಯದಲ್ಲಿ ರವಿವಾರ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸ ಲಾದ ಚೈತನ್ಯ ಸಂಭ್ರಮೋತ್ಸವದಲ್ಲಿ ಶ್ರೀಚೈತನ್ಯ ಸಂಭ್ರಮ ಗ್ರಂಥವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಪ್ರಪಂಚದಲ್ಲಿ ಸೋಲು ಎನ್ನುವುದಿದ್ದರೆ ಅದು ದೇವರ ಮುಂದೆ ಮಾತ್ರ. ದೇವರು ಸೃಷ್ಠಿಸಿದ ಈ ಶರೀರ ಭಗವಂತನ ಚಿಂತನೆ ಮತ್ತು ಸೇವೆಗೆ ಮಾತ್ರ ಮೀಸಲಾಗಿದೆ. ಈ ಶರೀರವು ಜಗತ್ತಿನ ಒಳಿತಿಗಾಗಿ ವ್ಯಯ ಮಾಡುತ್ತಾ ಭಗವಂತನಿಗೆ ಸಮರ್ಪಣೆ ಮಾಡಿದರೆ ನಮ್ಮ ಜನ್ಮಕ್ಕೆ ನ್ಯಾಯವನ್ನು ಸಲ್ಲಿಸಿದ್ದಂತಾಗುತ್ತದೆ ಎಂದರು.
ಉತ್ತರ ಪ್ರದೇಶ ವೃಂದಾವನ ಶ್ರೀರಾಧಾರಮಣ ದೇವಸ್ಥಾನದ ಧಾರ್ಮಿಕ ಮುಖಂಡ ಆಚಾರ್ಯ ಶ್ರೀವತ್ಸ ಗೋಸ್ವಾಮಿ ಮಾತನಾಡಿ, ಈ ಜಗತ್ತಿನ ಅಸ್ತಿತ್ವ ಭಕ್ತಿ ಸಂಕೀರ್ತನೆಗಳ ಮೇಲೆ ನಿರ್ಭರವಾಗಿದೆ. ಒಂದು ಕ್ಷಣ ಭಕ್ತಿ ಇಲ್ಲವಾದಲ್ಲಿ ಜಗತ್ತಿನ ಸರ್ವನಾಶ ನಿಶ್ಚಿತ ಎಂದು ಅಭಿಪ್ರಾಯ ಪಟ್ಟರು.
ಅಧ್ಯಕ್ಷತೆಯನ್ನು ಬೆಂಗಳೂರು ಇಸ್ಕಾನ್ ಅಧ್ಯಕ್ಷ ಪದ್ಮಶ್ರೀ ಪುರಸ್ಕ್ರತ ಮಧು ಪಂಡಿತ ದಾಸ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಡಾ.ಎ. ಹರಿದಾಸ್ ಭಟ್, ಕರ್ನಾಟಕ ಸಂಸ್ಕ್ರತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ ಮಾತನಾಡಿದರು.
ಬೆಂಗಳೂರು ಇಸ್ಕಾನ್ ಹಿರಿಯ ಉಪಾಧ್ಯಕ್ಷ ಚಂಚಲಾಪತಿ ದಾಸ ಆಶಯದ ನುಡಿಗಳನ್ನಾಡಿದರು. ಚೆನ್ನೈ ಹರೇಕೃಷ್ಣ ಪಂಥದ ಅಧ್ಯಕ್ಷ ಸ್ತೋಕ ಕೃಷ್ಣದಾಸ ವಂದಿಸಿದರು. ಉಡುಪಿಯ ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾರ್ವಂಗ ಕಾರ್ಯಕ್ರಮ ನಿರೂಪಿಸಿದರು.







