ವ್ಯಾಪಾರಕ್ಕೆ ಹಾನಿಯಾದಲ್ಲಿ ಸುಮ್ಮನಿರಲಾರೆ: ಟ್ರಂಪ್‌ಗೆ ಚೀನಾ ಎಚ್ಚರಿಕೆ

ಬೀಜಿಂಗ್, ಮಾ. 4: ಒಂದು ವೇಳೆ ಅಮೆರಿಕವು ತನ್ನ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯುಂಟು ಮಾಡಲು ಯತ್ನಿಸಿದಲ್ಲಿ ಚೀನಾವು ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳಲಾರದು ಎಂದು ಬೀಜಿಂಗ್‌ನ ಉನ್ನತ ಅಧಿಕಾರಿಯೊಬ್ಬರು ರವಿವಾರ ಎಚ್ಚರಿಕೆ ನೀಡಿದ್ದಾರೆ. ಚೀನಾದಿಂದ ಆಮದು ಮಾಡಿಕೊಳ್ಳಲಾಗುವ ಉಕ್ಕು ಹಾಗೂ ಆಲ್ಯುಮಿನಿಯಂ ಉತ್ಪನ್ನಗಳಿಗೆ ಅಧಿಕ ತೆರಿಗೆಗಳನ್ನು ವಿಧಿಸುವುದಾಗಿ ಟ್ರಂಪ್ ಘೋಷಿಸಿದ ಬಳಿಕ ಜಗತ್ತಿನ ಈ ಎರಡು ಪ್ರಬಲ ಆರ್ಥಿಕತೆಗಳ ನಡುವಿನ ವಾಣಿಜ್ಯ ಬಿಕ್ಕಟ್ಟು ಉಲ್ಬಣಿಸಿದೆ.
ಚೀನಿ ಸಂಸತ್‌ನ ವಕ್ತಾರ ಝಾಂಗ್ ಯೆಸುಯಿ ಈ ಬಗ್ಗೆ ಇಂದು ಬೀಜಿಂಗ್‌ನಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ, ‘‘ಅಮೆರಿಕದ ಜೊತೆ ವಾಣಿಜ್ಯ ಸಮರ ನಡೆಸಲು ಚೀನಾ ಬಯಸುವುದಿಲ್ಲ. ಆದರೆ ಒಂದು ವೇಳೆ ಅಮೆರಿಕದ ಕ್ರಮಗಳು, ಚೀನಾದ ವಾಣಿಜ್ಯ ಹಿತಾಸಕ್ತಿಗಳ ಮೇಲೆ ದುಷ್ಪರಿಣಾಮ ಬೀರಿದಲ್ಲಿ ಅದು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ’’ ಎಂದು ಹೇಳಿದ್ದಾರೆ.
ಅಮೆರಿಕದ ಸ್ವದೇಶಿ ಕೈಗಾರಿಕೆಗಳನ್ನು ರಕ್ಷಿಸಲು ಹಾಗೂ ಚೀನಿ ಉತ್ಪನ್ನಗಳಿಂದ ಸ್ವದೇಶಿ ಉತ್ಪನ್ನಗಳಿಗೆ ಎದುರಾಗುತ್ತಿರುವ ನಿರಂತರವಾದ ಬೆದರಿಕೆಯನ್ನು ತಡೆಗಟ್ಟಲು ಉಕ್ಕು ಮತ್ತು ಆಲ್ಯುಮಿನಿಯಂ ಉತ್ಪನ್ನಗಳಿಗೆ ಭಾರೀ ತೆರಿಗೆಗಳನ್ನು ವಿಧಿಸಲಾಗುವುದು ಎಂದು ಟ್ರಂಪ್ ಗುರುವಾರ ಘೋಷಿಸಿದ್ದರು. ಅಮೆರಿಕದ ಜೊತೆಗಿನ ದ್ವಿಪಕ್ಷೀಯ ವ್ಯಾಪಾರದಲ್ಲಿ ಚೀನಾವು 580 ಶತಕೋಟಿ ಡಾಲರ್‌ಗಳ ಸಿಂಹಪಾಲನ್ನು ಹೊಂದಿದೆ. ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಟ್ರಂಪ್ ಅವರು ದ್ವಿಪಕ್ಷೀಯ ವ್ಯಾಪಾರದಲ್ಲಿ ವಾಣಿಜ್ಯ ಕೊರತೆಯನ್ನು ಕಡಿಮೆಗೊಳಿಸುವಂತೆ ಚೀನಾದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. ಕಳೆದ ವರ್ಷ ಟ್ರಂಪ್ ಬೀಜಿಂಗ್‌ಗೆ ಭೇಟಿ ನೀಡಿದ್ದ ವೇಳೆ ಚೀನಾವು ಅಮೆರಿಕದಿಂದ 300 ಬೋಯಿಂಗ್ ವಿಮಾನಗಳ ಖರೀದಿ ಯೋಜನೆ ಸೇರಿದಂತೆ 250 ಶತಕೋಟಿ ಡಾಲರ್‌ಗಳ ವಾಣಿಜ್ಯ ಒಪ್ಪಂದಕ್ಕೆ ಸಹಿಹಾಕಿತ್ತು. ಆಮೆರಿಕದಿಂದ ಸೋಯಾಬೀನ್ಸ್, ಬೀಫ್ ಹಾಗೂ ತೈಲದ ಆಮದಿಗೂ ಅದು ಅವಕಾಶ ನೀಡಿತ್ತು.







