ಕಾಳು ಮೆಣಸು ಧಾರಣೆ ಕುಸಿತ ; ಆತಂಕದಲ್ಲಿ ಬೆಳೆಗಾರರು

ಸಾಂದರ್ಭಿಕ ಚಿತ್ರ
►ಆಮದು-ರಪ್ತು ವಹಿವಾಟುದಾರರ ಲಾಬಿಯಿಂದ ಬೆಲೆ ಕುಸಿತ
►ವಿದೇಶಗಳಿಂದ ಕಳಪೆ ಕಾಳು ಮೆಣಸು ಆಮದು
►ತುಟಿ ಬಿಚ್ಚದ ಸಂಸದರು
►ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಗಳ ಬೆಳೆಗಾರರಿಗೆ ಸಂಕಷ್ಟ
ಚಿಕ್ಕಮಗಳೂರು, ಮಾ.4: ಸಂಬಾರ ಪದಾರ್ಥಗಳ ರಾಜ, ಕಪ್ಪು ಚಿನ್ನ, ಔಷಧೀಯ ಗುಣಹೊಂದಿರುವ ಗಿಡಮೂಲಿಕೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಮಲೆನಾಡು ಭಾಗದ ಪ್ರಮುಖ ವಾಣಿಜ್ಯ ಬೆಳೆ ಕಾಳು ಮೆಣಸು ಬೆಳೆಗಾರರು ಬೆಲೆ ಕುಸಿತದಿಂದಾಗಿ ಆತಂಕದಲ್ಲಿದ್ದಾರೆ. ಕಳೆದ ವರ್ಷ ಪ್ರತೀ ಕೆ.ಜಿ.ಗೆ 600-700 ರೂ. ಇದ್ದ ಕಾಳು ಮೆಣಸು ಧಾರಣೆ, ಸದ್ಯ 340-350ಕ್ಕೆ ಕುಸಿದಿದ್ದು, ದಿನೇ ದಿನೇ ವಾಣಿಜ್ಯ ಪದಾರ್ಥ ಗಳ ಬೆಲೆ ಪಾತಾಳಕ್ಕಿಳಿಯುತ್ತಿದೆ. ಧಾರಣೆ ಕುಸಿತದಿಂದಾಗಿ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳ ಲಕ್ಷಾಂತರ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ.
ಕಾಫಿ ಕಣಿವೆ ಎಂದೇ ಹೆಸರಾಗಿರುವ ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿರುವ ಅರೇಬಿಕಾ, ರೋಬಾಸ್ಟಾ ಕಾಫಿ ತೋಟಗಳ ಮಧ್ಯೆ ಮಿಶ್ರ ಬೆಳೆಯಾಗಿ ಕಾಳು ಮೆಣಸನ್ನು ಬೆಳೆಗಾರರು ಬೆಳೆಯು ತ್ತಿದ್ದಾರೆ. ಈ ಮೂರು ಜಿಲ್ಲೆಗಳಿಂದ ಒಟ್ಟಾರೆ ವಾರ್ಷಿಕ 30-40 ಸಾವಿರ ಟನ್ ಉತ್ಪಾದನೆಯಾಗುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 20 ಸಾವಿರ ಟನ್ ಕಾಳು ಮೆಣಸಿನ ಉತ್ಪಾದನೆಯಾಗುತ್ತಿದೆ. ಇನ್ನು ಕೇರಳ, ತಮಿಳುನಾಡು ರಾಜ್ಯಗಳಲ್ಲಿ 15-20 ಸಾವಿರ ಟನ್ ಕಾಳು ಮೆಣಸು ಉತ್ಪಾನೆಯಾಗುತ್ತಿದ್ದು, ಒಟ್ಟಾರೆ ದೇಶದಲ್ಲಿ ಸುಮಾರು 60-70 ಸಾವಿರ ಟನ್ ಉತ್ಪಾದನೆಯಾಗುತ್ತಿದೆ.
ದುಬಾರಿಯಾದ ಖರ್ಚು; ಅಸಲೂ ಸಿಗುತ್ತಿಲ್ಲ: ಸದ್ಯ ಕಾಳು ಮೆಣಸಿನ ಬೆಲೆ ಪಾತಾಳ ಹಿಡಿದಿರುವುದರಿಂದ ಕೇರಳ, ತಮಿಳುನಾಡಿನ ಬೆಳೆಗಾರರೂ ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳ ರೈತರು ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದೆ. ಕಾಳು ಮೆಣಸಿನ ಬೆಲೆ ಪ್ರತೀ ಕೆ.ಜಿ.ಗೆ 300ರ ಆಸುಪಾಸಿನಲ್ಲಿರುವು ದರಿಂದ ಈ ಬೆಲೆ ರೈತರು ಪ್ರತೀ ಕೆ.ಜಿ. ಕಾಳು ಮೆಣಸು ಬೆಳೆಯಲು ಮಾಡುವ ವೆಚ್ಚ (410 ರೂ.) ಕ್ಕಿಂತಲೂ ಕಡಿಮೆಯಾಗಿದೆ. ಕಾಳುಮೆಣಸಿಗೆ ಕೀಟನಾಶಕ, ರಸಗೊಬ್ಬರದ ವೆಚ್ಚ ಹೆಚ್ಚು. ಅಲ್ಲದೇ, ಕಟಾವು ಮಾಡಲು ಕಾರ್ಮಿಕರಿಗೆ ದಿನದ ವೇತನ 550-600 ರೂ. ಇದೆ. ಈ ಸಮಸ್ಯೆಗಳಿಂದಾಗಿ ಬೆಳೆಗಾರರು, ಅದರಲ್ಲೂ ಸಣ್ಣ ಬೆಳೆಗಾರರು ಸದ್ಯದ ಧಾರಣೆಯಿಂದಾಗಿ ಕಂಗಾಲಾಗಿದ್ದಾರೆ.
ಆಮದು ತಡೆಗೆ ಕೇಂದ್ರ ನಿರ್ಲಕ್ಷ: ಕಪ್ಪು ಚಿನ್ನ ಎಂದೇ ಖ್ಯಾತಿ ಪಡೆದಿದ್ದ ಕಾಳು ಮೆಣಸು ಧಾರಣೆ ಕುಸಿತದಿಂದ ಕಂಗಾಲಾಗಿರುವ ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಬೆಳೆಗಾರರು ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಸೇರಿದಂತೆ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಕಾಳುಮೆಣಸು ಬೆಳೆಗಾರರ ಒಟ್ಟು 12 ಫೆಡರೇಶನ್ಗಳ ಸಮನ್ವಯ ಸಮಿತಿಯ ನೇತೃತ್ವದ ನಿಯೋಗವು ಕೆಲವೇ ತಿಂಗಳ ಅಂತರದಲ್ಲಿ ಮೂರು ಬಾರಿ ಕೇಂದ್ರ ಸರಕಾರದ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಕಾಳುಮೆಣಸು ಆಮದು ತಡೆಗೆ ಕ್ರಮವಹಿಸುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕಾಳು ಮೆಣಸು ಆಮದು ನಿಯಂತ್ರಣ ತಡೆಗೆ ಆಮದು ಶುಲ್ಕವನ್ನು 500 ರೂ.ಗೆ ಏರಿಸಿದೆ. ಆದರೆ, ಈ ಕ್ರಮದಿಂದ ವಿದೇಶದಿಂದ ಆಮದಾಗುತ್ತಿರುವ ಕಾಳು ಮೆಣಸಿನ ಪ್ರಮಾಣದಲ್ಲಿ ಯಾವುದೇ ಇಳಿಮುಖವಾಗಿಲ್ಲ. ಆಮದು ಶುಲ್ಕವಿದ್ದರೂ ಆಮದು, ರಫ್ತು ವಹಿವಾಟುದಾರರು ಪ್ರಭಾವಿಗಳ ಕರಾಮತ್ತಿನಿಂದಾಗಿ ಅನ್ಯಮಾರ್ಗದ ಮೂಲಕ ಕಳಪೆ ಗುಣಮಟ್ಟದ ಕಾಳುಮೆಣಸನ್ನು ದೇಶದೊಳಗೆ ಭಾರೀ ಪ್ರಮಾಣದಲ್ಲಿ ತರುತ್ತಿರುವುದರಿಂದ ಇಲ್ಲಿನ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಆಮದು, ರಫ್ತು ವಹಿವಾಟುದಾರರ ಈ ದಂಧೆಯಿಂದಾಗಿ ಸರಕಾರಕ್ಕೆ ಸಾವಿರಾರು ಕೋ. ರೂ. ತೆರಿಗೆ ನಷ್ಟವಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸುತ್ತಿಲ್ಲ ಎಂದು ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಜಯರಾಮ್ ಆರೋಪಿಸಿದ್ದಾರೆ.
ಬೆಲೆ ಕುಸಿತಕ್ಕೆಕಾರಣ
ಮುಕ್ತ ಮಾರುಕಟ್ಟೆ ನೀತಿಯಿಂದಾಗಿ ಆಮದು, ರಫ್ತು ವಹಿವಾಟುದಾರರು ವಿದೇಶಗಳಿಂದ ಕಾಳು ಮೆಣಸನ್ನು ಯಥೇಚ್ಛವಾಗಿ ಆಮದು ಮಾಡಿಕೊಳ್ಳುತ್ತಿದ್ದಾರೆ. ವಿಯೆಟ್ನಾಂ ಹಾಗೂ ಶ್ರೀಲಂಕಾದಲ್ಲಿ ಕಾಳು ಮೆಣಸಿನ ಉತ್ಪಾದನೆ ಹೆಚ್ಚಿದೆ. ಆದರೆ, ಈ ದೇಶಗಳಲ್ಲಿ ಬೆಳೆಯುವ ಕಾಳು ಮೆಣಸು ಅತ್ಯಂತ ಕಳಪೆಯಾಗಿರುವುದರಿಂದ ಬೆಲೆಯೂ ಕಡಿಮೆ ಇದೆ. ಈ ಕಾರಣಕ್ಕೆ ಆಮದು, ರಫ್ತು ವಹಿವಾಟುದಾರರು ಶ್ರೀಲಂಕಾ ಹಾಗೂ ವಿಯಟ್ನಾಂ ನಿಂದ ಭಾರೀ ಪ್ರಮಾಣದಲ್ಲಿ ಕಡಿಮೆ ಬೆಲೆ ನೀಡಿ ಆಮದು ಮಾಡಿಕೊಂಡು ಸಂಸ್ಕರಿಸಿ ಅಮೆರಿಕ, ಯೂರೋಪ್ನಂತಹ ರಾಷ್ಟ್ರಗಳಿಗೆ ರಪ್ತು ಮಾಡುತ್ತಿದ್ದಾರೆ. ಇದರ ಪರಿಣಾಮ ದೇಶೀಯವಾಗಿ ಬೆಳೆದ ಉತ್ತಮ ಗುಣಮಟ್ಟದ ಕಾಳು ಮೆಣಸನ್ನು ಖರೀದಿಸು ವವರಿಲ್ಲದಂತಾಗಿದ್ದು, ಅತ್ಯಂತ ಕಡಿಮೆ ಧಾರಣೆಗೆ ಬಿಕರಿಯಾಗುತ್ತಿದೆ.
ಕಾಳುಮೆಣಸು ಬೆಳೆಗಾರರ ಸಮಸ್ಯೆಯ ಬಗ್ಗೆ ರಾಜ್ಯದ ಎಲ್ಲ ಸಂಸದರಿಗೂ ಅರಿವಿದೆ. ಕಾಳು ಮೆಣಸು ಬೆಳೆಯುವ ಸಂಸದರೂ ರಾಜ್ಯದಲ್ಲಿ ಇದ್ದಾರೆ. ಆದರೆ, ಬೆಳೆಗಾರರ ಸಮಸ್ಯೆಯ ಬಗ್ಗೆ ಈ ಸಂಸದರು ಸಂಸತ್ನಲ್ಲಿ ತುಟಿ ಬಿಚ್ಚುತ್ತಿಲ್ಲ ಎಂಬ ಆರೋಪ ಮಲೆನಾಡಿನಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಸದ್ಯ ನಡೆಯುವ ಸಂಸತ್ ಅಧಿವೇಶನದಲ್ಲಿ ರಾಜ್ಯದ ಸಂಸದರು ಬೆಳೆಗಾರರ ಸಮಸ್ಯೆಗಳ ಬಗ್ಗೆ ಮಾತನಾಡಬೇಕು. ಕೇಂದ್ರ ಸರಕಾರ ಆಮದು ತಡೆ ಹಾಗೂ ಅಕ್ರಮ ದಂಧೆಗೆ ತಡೆ ಹಾಕಿ, ದೇಶೀಯವಾಗಿ ಬೆಳೆಯುವ ಉತ್ತಮ ಗುಣಮಟ್ಟದ ಕಾಳುಮೆಣಸಿಗೆ ಉತ್ತಮ ಮಾರುಕಟ್ಟೆ ಧಾರಣೆ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸದಿದ್ದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳ ಬೆಳೆಗಾರರ 12 ಫೆಡರೇಶನ್ಗಳ ಸಮನ್ವಯ ಸಮಿತಿಯ ಸಭೆ ಕೇಂದ್ರ ಸರಕಾರದ ನೀತಿ ವಿರುದ್ಧ ಪ್ರತಿಭಟನೆಯ ರೂಪುರೇಷೆಗಳನ್ನು ರೂಪಿಸಲಾಗುವುದು.
ಬಿ.ಜಯರಾಮ್, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ.







