ಅಪರೂಪದ ಖಾಯಿಲೆಗೆ ತುತ್ತಾದ ಬಾಲಿವುಡ್ ನಟ ಇರ್ಫಾನ್ ಖಾನ್
ಮುಂಬೈ, ಮಾ.5: ತಾನು ಅಪರೂಪದ ರೋಗ ಬಾಧಿತನಾಗಿದ್ದು ರೋಗ ನಿರ್ಧರಿಸಲು ಇನ್ನಷ್ಟು ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಿದ್ದೇನೆ ಎಂದು ಸಿನೆಮ ನಟ ಇರ್ಫಾನ್ ಖಾನ್ ಟ್ವೀಟ್ ಮಾಡಿದ್ದಾರೆ.
ಇರ್ಫಾನ್ಖಾನ್ ಜಾಂಡೀಸ್ (ಕಾಮಾಲೆ) ರೋಗದಿಂದ ಬಳಲುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ತನ್ನನ್ನು ಬಾಧಿಸಿರುವ ಖಾಯಿಲೆ ಕಾಮಾಲೆಯಲ್ಲ. ಅದೊಂದು ಅಪರೂಪದ ಕಾಯಿಲೆಯಾಗಿದೆ. ಆದರೆ ತಾನು ಧೈರ್ಯ ಕಳೆದುಕೊಂಡಿಲ್ಲ. ಕುಟುಂಬ ವರ್ಗದವರು ಹಾಗೂ ಸ್ನೇಹಿತರ ಬೆಂಬಲದಿಂದ ಉತ್ಸಾಹದಿಂದಲೇ ಭವಿಷ್ಯದ ಬಗ್ಗೆ ಆಶಾಭಾವನೆ ಹೊಂದಿದ್ದೇನೆ. ಹತ್ತು-ಹದಿನೈದು ದಿನದಲ್ಲಿ ನನ್ನನ್ನು ಕಾಡುತ್ತಿರುವ ಖಾಯಿಲೆಯ ವಿವರ ತಿಳಿದುಬರಬಹುದು. ಆಗ ಖಂಡಿತಾ ನಿಮಗೆ ತಿಳಿಸುತ್ತೇನೆ ಎಂದು ಇರ್ಫಾನ್ ಖಾನ್ ಟ್ವಿಟರ್ನಲ್ಲಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ವಿಶಾಲ್ ಭಾರದ್ವಾಜ್ ನಿರ್ದೇಶಿಸಿರುವ ಮಾಫಿಯಾ ಕಿಂಗ್ಪಿನ್ ಸಪ್ನಾ ದೀದಿ ಕುರಿತಾದ ಸಿನೆಮದ ಚಿತ್ರೀಕರಣ ಈಗ ಸ್ಥಗಿತಗೊಂಡಿದೆ. ಸಿನೆಮದಲ್ಲಿ ಇರ್ಫಾನ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಮುಖ್ಯ ಭೂಮಿಕೆ ನಿರ್ವಹಿಸುತ್ತಿದ್ದಾರೆ. ದೀಪಿಕಾಗೆ ಬೆನ್ನುನೋವು ಕಾಣಿಸಿಕೊಂಡಿದ್ದರೆ, ಇರ್ಫಾನ್ಗೆ ಕಾಮಾಲೆ ರೋಗ ಎಂದು ಈ ಹಿಂದೆ ವರದಿಯಾಗಿತ್ತು.