ರಾಮಕ್ಷೇತ್ರದ ಶ್ರೀಗಳಿಗೆ ಭಟ್ಕಳ ಶಾಹಿನ್ ಸ್ಪೋರ್ಟ್ಸ್ ಸೆಂಟರ್ ಸದಸ್ಯರಿಂದ ಫಲಪುಷ್ಪಾ ನೀಡಿ, ಸ್ವಾಗತ

ಭಟ್ಕಳ, ಮಾ. 5: ತಾಲೂಕಿನ ಕರಿಕಲ್‌ನಲ್ಲಿ ನಿರ್ಮಿಸಲಾದ ನೂತನ ಧ್ಯಾನ ಕುಟೀರದ ಉದ್ಘಾಟನೆಯನ್ನು ನರೆವೇರಿಸಲು ಭಟ್ಕಳಕ್ಕೆ ಆಗಮಿಸಿದ ಶ್ರೀರಾಮಕ್ಷೇತ್ರ ಧರ್ಮಸ್ಥಳದ ಸ್ವಾಮಿಜೀಗಳಾದ ಶ್ರೀ ಭ್ರಹ್ಮಾನಂದ ಸರಸ್ವತಿ ಸ್ವಾಮಿಜಿಯನ್ನು ಮಗ್ದೂಮ್ ಕಾಲನಿಯ ಮುಸ್ಲಿಮರು ಸ್ವಾಗತಿಸಿ, ಅವರಿಗೆ ಶಾಲು ಹೊದಿಸಿ ಫಲಪುಷ್ಪಾ ನೀಡಿ ಗೌರವಿಸಿದರು.
ಕರಿಕಲ್ ಗ್ರಾಮಕ್ಕೆ ಹೋಗಬೇಕಾದ ಸ್ವಾಮೀಜಿಗಳು ಮಗ್ದೂಮ್ ಕಾಲನಿ ಮಾರ್ಗವಾಗಿ ಹೋಗಬೇಕಾಗಿದ್ದು, ಈ ಸಂದರ್ಭ ಸ್ವಾಮಿಜೀಗಳನ್ನು ಸ್ವಾಗತಿಸಲು ಅಲ್ಲಿನ ಮುಸ್ಲಿಮ್ ಯುವಕವ ಸಂಘವಾಗಿರುವ ಶಾಹಿನ್ ಸ್ಪೋರ್ಟ್ಸ್ ಸೆಂಟರ್ ನ ಸದಸ್ಯರು ಶಾಲು ಹಾಗೂ ಹಾರವನ್ನು ಹಿಡಿದು ನಿಂತುಕೊಂಡಿದ್ದು ಸ್ವಾಮೀಜಿಗಳ ಆಗಮನಕ್ಕೆ ಸರಿಯಾಗಿ ಅವರನ್ನು ಕಾರಿನಿಂದ ಬರಮಾಡಿಕೊಂಡು ರಸ್ತೆಯಲ್ಲೇ ಶಾಲು ಹಾಗೂ ಫಲಪುಷ್ಪವನ್ನು ನೀಡಿ ಗೌರವಿಸಿದರು.
ಭಟ್ಕಳದಲ್ಲಿ ಯಾವತ್ತು ಶಾಂತಿ ಸೌಹಾರ್ದತೆ, ಮಾನವೀಯತೆ ನಲೆಸುವ ನಿಟ್ಟಿನಲ್ಲಿ ಇಲ್ಲಿನ ಮುಸ್ಲಿಮ್ ಸಂಘಟನೆಗಳು ಕಾರ್ಯನಿರತವಾಗಿದ್ದು ಹಲವು ಧಾರ್ಮಿಕ, ಸೌಹಾರ್ದತೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಹಿಂದೂ-ಮುಸ್ಲಿಮರ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ. ಕಳೆದ ವಾರ ಇದೇ ಸ್ವಾಮಿಜೀಗಳು ಹಲವು ಧರ್ಮಗಳು ಒಂದು ಭಾರತ ಎಂಬ ಸೌಹಾರ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯಕ್ಕೆ ಶಾಂತಿ ಸಹನೆಯ ಉಪದೇಶ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ಈ ಸಂದರ್ಭ ಶಾಹಿನ್ ಸ್ಪೋರ್ಟ್ಸ್ ಸೆಂಟರ್ ಅಧ್ಯಕ್ಷ ಸಮಿಯುಲ್ಲಾ ಇತ್ತಲ್, ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ, ಉಪಾಧ್ಯಕ್ಷ ಖಯ್ಯುಮ್ ಕೋಲಂಬೋ, ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹುಸೈನ್ ಹಲ್ಲಾರೆ, ಶಬ್ಬರ್ ಬಾಕ್ಪಠಾನ್, ಇರ್ಫಾನ್ ಮೆಡಿಕಲ್, ಇಮ್ಶಾದ್ ಮುಖ್ತಸರ್, ಮೌಲಾನ ಫಾರೂಕ್ ಮುಂತಾದವರು ಉಪಸ್ಥಿತರಿದ್ದರು.







