ಮಡಿಕೇರಿ: ಸಿಐಟಿಯು ವತಿಯಿಂದ ವಿವಿಧ ಬೇಡಿಕೆಗಳ ಪ್ರಣಾಳಿಕೆಯ ಪ್ರಚಾರ ಜಾಥ

ಮಡಿಕೇರಿ, ಮಾ.5: ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಪ್ರಣಾಳಿಕೆಯ ಪ್ರಚಾರ ಜಾಥ ಕಾರ್ಮಿಕ ಸಂಘಟನೆ ಸಿಐಟಿಯು ವತಿಯಿಂದ ನಡೆಯಿತು.
ನಗರದ ಜನರಲ್ ತಿಮ್ಮಯ್ಯ ವೃತ್ತದ ಬಳಿ ಸಂಘಟನೆ ಪ್ರಮುಖರು ಮಾತನಾಡಿ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಈ ಬಾರಿಯ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಾರ್ಮಿಕರ ಬೇಡಿಕೆಗಳಿಗೆ ಒತ್ತು ನೀಡಬೇಕೆಂದು ಒತ್ತಾಯಿಸಿದರು.
ರೂ.18 ಸಾವಿರ ಕನಿಷ್ಟ ವೇತನ ನೀಡಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಅಸಂಘಟಿತ ಕಾರ್ಮಿಕರ ಭವಿಷ್ಯನಿಧಿಗೆ ಶಾಸನ ರೂಪಿಸಬೇಕು, ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ನಿಧಿ-ಕಲ್ಯಾಣ ಯೋಜನೆಗಳನ್ನು ನೀಡಬೇಕು, ಎಲ್ಲಾ ಜಿಲ್ಲೆಗಳಲ್ಲೂ ಕಾರ್ಮಿಕರ ನ್ಯಾಯಾಲಯ ತೆರೆಯಬೇಕು, ಕಾರ್ಮಿಕರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಸಾರ್ವಜನಿಕ ಉದ್ದಿಮೆಗಳ ಸಂರಕ್ಷಣೆ ಮಾಡಬೇಕು, ಬೆಲೆ ಏರಿಕೆ ನಿಯಂತ್ರಿಸಬೇಕು, ಸಾರ್ವತ್ರಿಕ ಪಡಿತರ ವ್ಯವಸ್ಥೆ ಕಲ್ಪಿಸಬೇಕು, ವಸತಿ ಹೀನ ಅಸಂಘಟಿತ ಕಾರ್ಮಿಕರಿಗೆ ವಸತಿ ನೀಡಬೇಕು.
ಭಾರತೀಯ ಕಾರ್ಮಿಕ ಸಮ್ಮೇಳನ ಮಾದರಿ ಕರ್ನಾಟಕ ಕಾರ್ಮಿಕ ಸಮ್ಮೇಳನ ಮಾಡಬೇಕು, ನಿರುದ್ಯೋಗ ನಿವಾರಣೆ ಮಾಡಿ ಉದ್ಯೋಗ ಸೃಷ್ಟಿಸಬೇಕು, ಕೈಗಾರಿಕಾ ಕಾರ್ಮಿಕರ ನಿವೃತ್ತಿ ವಯಸ್ಸು 60ಕ್ಕೆ ಹೆಚ್ಚಿಸಬೇಕು, ನೂತನ ಪಿಂಚಣಿ ಬದಲು ಖಾತ್ರಿ ಪಿಂಚಣಿ ನೀಡಬೇಕು, ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕು, ಶಿಕ್ಷಣದ ಹಕ್ಕು ಕಾಯಿದೆ ಸಮರ್ಪಕ ಜಾರಿ ಗೊಳಿಸಬೇಕು, ಆರೋಗ್ಯದ ಹಕ್ಕು ನೀಡಬೇಕು, ಕೃಷಿ ಕೂಲಿ ಕಾರ್ಮಿಕರಿಗೆ ಸೇವಾ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಸಿ.ಐ.ಟಿ.ಯು ಪ್ರಮುಖರಾದ ಪಿ.ಆರ್.ಭರತ್, ರಮೇಶ್, ಸಾಬು, ಜಾನಕಿ ಮತ್ತಿತರರು ಈ ಸಂದರ್ಭ ಹಾಜರಿದ್ದರು.







