ಮೇಘಾಲಯದ ಮುಖ್ಯಮಂತ್ರಿಯಾಗಿ ಕೊನ್ರಾಡ್ ಸಂಗ್ಮಾ ಪ್ರಮಾಣ ವಚನ ಸ್ವೀಕಾರ
ಹೊಸದಿಲ್ಲಿ, ಮಾ.6: ನ್ಯಾಶನಲ್ ಪೀಪಲ್ಸ್ ಪಾರ್ಟಿ(ಎನ್ಪಿಪಿ)ಅಧ್ಯಕ್ಷ ಕೊನ್ರಾಡ್ ಸಂಗ್ಮಾ ಮೇಘಾಲಯದ ನೂತನ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಳಿಕ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಎನ್ಪಿಪಿ ಎರಡು ಪ್ರಾದೇಶಿಕ ಪಕ್ಷಗಳು, ಬಿಜೆಪಿ ಹಾಗೂ ಪಕ್ಷೇತರ ಶಾಸಕರ ಬೆಂಬಲದಿಂದ ಮೈತ್ರಿ ಸರಕಾರವನ್ನು ರಚಿಸಿದೆ.
ಕೊನ್ರಾಡ್ ಸಂಗ್ಮಾ ಮೇಘಾಲಯದಲ್ಲಿ 10 ವರ್ಷ ಮುಖ್ಯಮಂತ್ರಿಯಾಗಿದ್ದ ಮುಕುಲ್ ಸಂಗ್ಮಾ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಫಲಿತಾಂಶ ಹೊರಬಿದ್ದ ಬಳಿಕ ರಾಜ್ಯಪಾಲ ಗಂಗ ಪ್ರಸಾದ್ರನ್ನ್ನು ಭೇಟಿಯಾಗಿದ್ದ ಕೊನ್ರಾಡ್ 60 ಸದಸ್ಯರ ಅಸೆಂಬ್ಲಿಯಲ್ಲಿ 34 ಸದಸ್ಯರ ಬೆಂಬಲವಿರುವ ಪತ್ರವನ್ನು ಸಲ್ಲಿಸಿದ್ದರು.
ಎನ್ಪಿಪಿಯಿಂದ 19, ಯುನೈಟೆಡ್ ಡೆಮೊಕ್ರಾಟಿಕ್ ಪಕ್ಷ(ಯುಡಿಪಿ)6, ಪೀಪಲ್ಸ್ ಡೆಮಾಕ್ರಾಟಿಕ್ ಫ್ರಂಟ್(ಪಿಡಿಎಫ್) ನಾಲ್ಕು, ಹಿಲ್ ಸ್ಟೇಟ್ ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ ಹಾಗೂ ಬಿಜೆಪಿಯ ತಲಾ ಎರಡು ಶಾಸಕರು,ಓರ್ವ ಪಕ್ಷೇತರ ಶಾಸಕ ಬೆಂಬಲ ವ್ಯಕ್ತಪಡಿಸಿದ್ದರು.
ಮುಖ್ಯಮಂತ್ರಿ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಉಪಸ್ಥಿತರಿದ್ದರು.