ಬಿಜೆಪಿಯ ‘ಸುವರ್ಣಯುಗ’ ಇನ್ನೂ ಆರಂಭಗೊಂಡಿಲ್ಲ: ಅಮಿತ್ ಶಾ

ಹೊಸದಿಲ್ಲಿ,ಮಾ. 6: ಬಿಜೆಪಿಯ ಸುವರ್ಣಯುಗ ಇನ್ನಷ್ಟೇ ಬರಬೇಕಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಸಿಕ್ಕ ಭಾರೀ ಗೆಲುವಿನಿಂದ ತೃಪ್ತಿಪಡಬಾರದು. ಇನ್ನೂ ಹೆಚ್ಚೆಚ್ಚು ಕೆಲಸಗಳನ್ನು ಮಾಡಬೇಕೆಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಪಶ್ಚಿಮ ಬಂಗಾಳ, ಕೇರಳ, ಒಡಿಶಾ ರಾಜ್ಯಗಳಲ್ಲಿ ಅಧಿಕಾರ ಸಿಗುವವರೆಗೆ ಪಕ್ಷದ ‘ಸುವರ್ಣ ಯುಗ’ ಆರಂಭಗೊಳ್ಳದು ಎಂದ ಅವರು ಕೇಂದ್ರ ಸಚಿವ ವಿಜಯ್ ಗೋಯಲ್‍ರ ನಿವಾಸದಲ್ಲಿ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡುತ್ತಿದ್ದರು. ದೇಶದ ಎಲ್ಲ ಬೂತ್‍ಗಳಲ್ಲಿ ಕಾರ್ಯಕರ್ತರು ಇರುವಂತಾಗಬೇಕು. ಎಲ್ಲ ಪಂಚಾಯತ್‍ಗಳಲ್ಲಿ ಬಿಜೆಪಿ ಪ್ರಾತಿನಿಧ್ಯ ಹೊಂದಬೇಕು ಎನ್ನುವ ಗುರಿಯನ್ನು ನಾವು ಸಾಧಿಸಬೇಕಾಗಿದೆ ಎಂದರು.
ಪಕ್ಷದ ಸುವರ್ಣಯುಗ ಆರಂಭಗೊಂಡಿದೆ ಎಂದು ಕೆಲವು ಕಾರ್ಯಕರ್ತರು ಹೇಳುತ್ತಿದ್ದಾರೆ. ಆದರೆ ನಾನು ಒಂದು ವಿಷಯ ಸ್ಪಷ್ಟಪಡಿಸಬಯಸುತ್ತಿದ್ದೇನೆ. ಇದು ಸುವರ್ಣ ಯುಗ ಅಲ್ಲ. ಇನ್ನೂ ಕೇರಳ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕಿಲ್ಲ. ಈ ರಾಜ್ಯಗಳಲ್ಲಿ ಅಧಿಕಾರ ಸಿಗುವವರೆಗೆ ಕಾರ್ಯಕರ್ತರು ವಿಶ್ರಮಿಸಬಾರದು. ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‍ಗಳಲ್ಲಿ ಮಿತ್ರಪಕ್ಷಗಳೊಂದಿಗೆ ಸೇರಿ ಬಿಜೆಪಿ ಸರಕಾರ ರಚಿಸಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ..





