ಕೊಡಗಿನ ಮೂಲಕ ರೈಲ್ವೆ ಮಾರ್ಗಕ್ಕೆ ಅನುಮತಿ ಇಲ್ಲ: ರೈಲ್ವೆ ಸಚಿವ ಪಿಯೂಷ್ ಗೋಯಲ್

ಮಡಿಕೇರಿ, ಮಾ.6: ಮೈಸೂರು- ತಲಚೇರಿ ನಡುವಿನ ರೈಲ್ವೆ ಮಾರ್ಗದ ಅನುಷ್ಠಾನದಿಂದ ಪರಿಸರ ಮತ್ತು ವನ್ಯಜೀವಿಗಳ ಮೇಲಾಗುವ ಪರಿಣಾಮಗಳ ಸ್ಪಷ್ಟ ಅರಿವಿದ್ದು, ಈ ಪ್ರಸ್ತಾಪಕ್ಕೆ ಅನುಮತಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲವೆಂದು ಕೇಂದ್ರದ ರೈಲ್ವೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಭರವಸೆ ನೀಡಿರುವುದಾಗಿ ಕೊಡಗು ಏಕೀಕರಣ ರಂಗ ಮತ್ತು ವೈಲ್ಡ್ ಲೈಫ್ ಫಸ್ಟ್ ಸಂಘಟನೆ ತಿಳಿಸಿದೆ.
ಸಂಘಟನೆಯ ಪ್ರಮುಖರ ನಿಯೋಗ ಮಾ.5 ರಂದು ದೆಹಲಿಯಲ್ಲಿನ ರೈಲ್ ಭವನದಲ್ಲಿ ಸಚಿವರನ್ನು ಭೇಟಿಯಾಗಿ ಮೈಸೂರು- ತಲಚೇರಿ ನಡುವಿನ ರೈಲ್ವೆ ಮಾರ್ಗವನ್ನು ಪರಿಸರ ಸೂಕ್ಷ್ಮ ಪ್ರದೇಶವಾದ ಕೊಡಗು ಜಿಲ್ಲೆಯ ಮೂಲಕ ಅನುಷ್ಠಾನಗೊಳಿಸದಿರುವಂತೆ ಮನವಿ ಮಾಡಿತು.
ಈ ಸಂದರ್ಭ ಮಾತನಾಡಿದ ರೈಲ್ವೆ ಖಾತೆ ಸಚಿವರಾದ ಪಿಯೂಷ್ ಗೋಯಲ್ ಅವರು ರೈಲ್ವೆ ಸಚಿವಾಲಯಕ್ಕೆ ಈ ಪ್ರಸ್ತಾವನೆಯಿಂದ ಎದುರಾಗಬಹುದಾದ ಸಮಸ್ಯೆಗಳನ್ನು ಮನಗಂಡು 1960ರಿಂದಲೇ ಈ ಪ್ರಸ್ತಾವನೆಯನ್ನು ತಡೆ ಹಿಡಿಯಲಾಗಿದೆ. ಜಲಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಮತ್ತು ಅತೀಹೆಚ್ಚು ವನ್ಯಜೀವಿ ಸಾಂದ್ರತೆಯಿರುವ ಈ ಪ್ರದೇಶದಲ್ಲಿ ರೈಲ್ವೆ ಮಾರ್ಗವನ್ನು ರೂಪಿಸಿದಲ್ಲಿ ಈಶಾನ್ಯ ಭಾರತದಂತೆ ಆನೆಗಳ ಸಂತತಿಗೆ ಅಪಾಯವುಂಟಾಗುವ ಸಾಧ್ಯತೆಯಿರುವುದರಿಂದ ಈ ಯೋಜನೆಗೆ ಅನುಮತಿ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಕೊಡಗು ಜಿಲ್ಲೆಯ ಅರಣ್ಯ ಪ್ರದೇಶ ದಕ್ಷಿಣ ಭಾರತದ ಜೀವನದಿ ಕಾವೇರಿಯ ಪ್ರಮುಖ ಜಲಮೂಲವಾಗಿದೆ. ಈ ಪ್ರದೇಶ ಏಪ್ಯಾದ ಕಾಡಾನೆಗಳ ಅಳಿದುಳಿದ ಆವಾಸ ಸ್ಥಾನವಾಗಿದೆ. ದಕ್ಷಿಣ ಕರ್ನಾಟಕ ಮತ್ತು ಉತ್ತರ ಕೇರಳದ ನಡುವಿರುವ ಸಮರ್ಪಕ ರಸ್ತೆ ಸಂಪರ್ಕ ಜಾಲ ಮತ್ತು ಮೈಸೂರು- ಹಾಸನ- ಮಂಗಳೂರು- ತಲಚೇರಿ ನಡುವಿನ ರೈಲ್ವೆ ಮಾರ್ಗದ ಬಗ್ಗೆ ನಿಯೋಗ ಸಚಿವರ ಗಮನಸೆಳೆಯಿತು.
ನಿಯೋಗದ ನೇತೃತ್ವವನ್ನು ವೈಲ್ಡ್ ಲೈಫ್ ಫಸ್ಟ್ ಸಂಘಟನೆಯ ಕೆ.ಎಂ. ಚಿಣ್ಣಪ್ಪ ವಹಿಸಿದ್ದರು. ನಿಯೋಗದಲ್ಲಿ ಕೊಡಗು ಏಕೀಕರಣ ರಂಗದ ಎ.ಎ. ತಮ್ಮು ಪೂವಯ್ಯ, ವೈಲ್ಡ್ ಲೈಫ್ ಫಸ್ಟ್ ಸಂಘಟನೆಯ ಪ್ರವೀಣ್ ಭಾರ್ಗವ್ ಹಾಗೂ ಹೆಚ್.ಎನ್.ಎ.ಪ್ರಸಾದ್ ವಹಿಸಿದ್ದರು ಎಂದು ಪ್ರಮುಖರಾದ ಪಿ.ಎಂ.ಮುತ್ತಣ್ಣ ತಿಳಿಸಿದ್ದಾರೆ.







