ಬಾಗೇಪಲ್ಲಿ: ಲೈಂಗಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಬಾಲಕಿ

ಬಾಗೇಪಲ್ಲಿ,ಮಾ.6: ಲೈಂಗಿಕ ಕಿರುಕುಳ ತಾಳಲಾರದೆ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಾಲೂಕಿನ ಗೂಳೂರು ಹೋಬಳಿ ತಿಮ್ಮಂಪಲ್ಲಿ ಗ್ರಾಪಂ ವ್ಯಾಪ್ತಿಯ ಮುಲ್ಲಂಗಿಚಟ್ಲಪಲ್ಲಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಬಾಲಕಿ ತಿಮ್ಮಂಪಲ್ಲಿ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇದೇ ಗ್ರಾಮದ ವೆಂಕಟರೆಡ್ಡಿ ಎಂಬವರ ಪುತ್ರ ಎಂ.ವಿ.ಹರೀಶ್(17) ಬಾಲಕಿಯನ್ನು 2-3 ತಿಂಗಳಿಂದ ಚುಡಾಯಿಸಿ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ತಿಮ್ಮಂಪಲ್ಲಿಯಲ್ಲಿರುವ ಸರಕಾರಿ ಪ್ರೌಡಶಾಲೆಗೆ ದಿನ ನಿತ್ಯ ಹೋಗಿ ಬರುತ್ತಿದ್ದ ಬಾಲಕಿಯನ್ನು ಹರೀಶ್ ಅಡ್ಡಗಟ್ಟಿ ಪ್ರೀತಿಸುವಂತೆ ಪೀಡಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದರಿಂದ ಬೇಸತ್ತ ಬಾಲಕಿ ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ನೇಣಿಗೆ ಶರಣಾಗಿದ್ದಾಳೆ. ಈ ಮೊದಲೇ ಹರೀಶ್ ಬಾಲಕಿಯನ್ನು ಚುಡಾಯಿಸುತ್ತಿರುವುದು ಕಂಡಿದ್ದ ಗ್ರಾಮಸ್ಥರು ಹರೀಶನ ಮೇಲೆ ಅನುಮಾನಗೊಂಡು ಮನೆಯಿಂದ ಕರೆತಂದು ಗ್ರಾಮದಲ್ಲಿ ಕಂಬಕ್ಕೆ ಕಟ್ಟಿ ಥಳಿಸಿದಾಗ ತಾನು ಚುಡಾಯಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಗ್ರಾಮಸ್ಥರ ಮುಂದೆ ಒಪ್ಪಿಕೊಂಡಿದ್ದಾನೆ. ನಂತರ ಗ್ರಾಮಸ್ಥರು ಬಾಲಕನನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಬಾಲಕಿಯ ಶವ ಪರೀಕ್ಷೆಯನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ನೆರವೇರಿಸಲಾಯಿತು.
ಆರೋಪಿಯನ್ನು ಬಂಧಿರುವ ಪೊಲೀಸರು ಚಿಕ್ಕಬಳ್ಳಾಪುರ ಬಾಲಾಪರಾಧಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದಾರೆ.







