ಮಾ.10ರಂದು ‘ಕಯ್ಯರ ನೆನಪು’ ಕಾರ್ಯಕ್ರಮ
ಉಡುಪಿ, ಮಾ.6: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಉಡುಪಿ ಬಂಟರ ಸಂಘದ ಸಹಕಾರದೊಂದಿಗೆ ಶತಮಾನ ಕಳೆದ ಸಾಧಕರ ಸಂಸ್ಮರಣೆ ಯಲ್ಲಿ ಹಿರಿಯ ಕವಿ ಕಯ್ಯರ ಕಿಂಞಣ್ಣ ರೈ ಸಾಹಿತ್ಯ- ಕೃಷಿ- ಹೋರಾಟ ‘ಕಯ್ಯರ ನೆನಪು’ ಕಾರ್ಯಕ್ರಮವನ್ನು ಮಾ.10ರಂದು ಅಪರಾಹ್ನ 2:30ಕ್ಕೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಲೇಖಕಿ ವೈದೇಹಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ವಹಿಸಲಿರುವರು. ಈ ಸಂದರ್ಭದಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಂಚಿತ್ತಾಯ ಕಾಸರಗೋಡು ಅವರನ್ನು ಸನ್ಮಾನಿಸಲಾಗುವುದು ಎಂದು ಅಕಾಡೆಮಿ ಸದಸ್ಯ ಸಂಚಾಲಕ ಡಾ. ವೈ.ಎನ್.ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ‘ಕಯ್ಯಾರರ ಸಾಹಿತ್ಯ ಕೃಷಿ’ ಮತ್ತು ಡಾ.ಸದಾನಂದ ಪೆರ್ಲ ‘ಗಡಿನಾಡ ಹೋರಾಟ’ ಕುರಿತು ವಿಚಾರ ಮಂಡಿಸಲಿರುವರು. ಕವಿ ಕಾವ್ಯ ಗಾಯನದಲ್ಲಿ ಚಂದ್ರಶೇಖರ್ ಕೆದ್ಲಾಯ ಹಾಗೂ ಡಾ.ಪ್ರಸನ್ನ ರೈ ಹಾಡಲಿರುವರು.
ಕಯ್ಯರ ಕವಿತೆಗಳ ಭಾಷಾಂತರದ ಸೊಗಡು ಕಾರ್ಯಕ್ರಮದಲ್ಲಿ ರಘು ಇಡ್ಕಿದು, ರಾಮಚಂದ್ರ ಪೈ, ಮುಹಮ್ಮದ್ ಬಡ್ಡೂರು, ಮಿಥಾಲಿ ರೈ ಕವಿತೆಗಳನ್ನು ವಾಚಿಸಲಿರುವರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಂಬಾತನಯ ಮುದ್ರಾಡಿ ಹಾಗೂ ಎಸ್.ಡಿ.ಪೆಜತ್ತಾಯ ಭಾಗವಹಿಸಲಿರುವರು.
ಸುದ್ದಿಗೋಷ್ಠಿಯಲ್ಲಿ ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಭುವನ ಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು.







