ಮುಸ್ಲಿಂ ಸಮುದಾಯದ ಮೇಲಿನ ಆಕ್ರಮಣ ನಿಲ್ಲಿಸಿ: ಉಡುಪಿಯ ಏಕತಾ ಸಮಾವೇಶದಲ್ಲಿ ಠರಾವು ಮಂಡನೆ
ಉಡುಪಿ, ಮಾ.6: ಭಾರತದಲ್ಲಿನ ಫ್ಯಾಸಿಸ್ಟ್ ಶಕ್ತಿಗಳು ವಿವಿಧ ನೆಪಗಳನ್ನೊಡ್ಡಿ ಮುಸ್ಲಿಂ ಸಮುದಾಯದ ಮೇಲೆ ಮಾಡುವ ಆಕ್ರಮಣಗಳನ್ನು ಮತ್ತು ಸದಾ ಮುಸ್ಲಿಂ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಮಾಡುತ್ತಿರುವ ಪ್ರಯತ್ನ ಗಳನ್ನು ತಕ್ಷಣ ನಿಲ್ಲಿಸಬೇಕು ಸೇರಿದಂತೆ ವಿವಿಧ ಠರಾವುಗಳನ್ನು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದಿಂದ ಮಾ.4ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ಏಕತಾ ಸಮಾವೇಶದಲ್ಲಿ ಮಂಡಿಸಲಾಯಿತು.
ಈ ಸಮಾವೇಶವು ಮುಸ್ಲಿಂ ಸಮುದಾಯವು ತಮ್ಮಿಳಗಿನ ಅಂಶಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟು ಸಮುದಾಯದ ಹಿತರಕ್ಷಣೆಗಾಗಿ ಒಂದಾಗಿ ಕೆಲಸ ಮಾಡಬೇಕು. ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಅವರ ರಾಜಕೀಯ ಭಾಗಿದಾರಿಕೆಯನ್ನು ರಾಜಕೀಯ ಪಕ್ಷಗಳು ಖಾತ್ರಿ ಪಡಿಸಬೇಕು.
ಮುಸ್ಲಿಮ್ ಸಮುದಾಯ ಪ್ರಸಕ್ತ ವಿದ್ಯಮಾನಗಳಿಂದಾಗಿ ನಿರಾಶರಾಗದೆ, ಯಾವುದೇ ಪ್ರಚೋದನೆಗೊಳಗಾಗದೆ ಸಂವಿಧಾನದ ಚೌಕಟ್ಟಿನಲ್ಲಿ ಶಾಂತಿ ಮತ್ತು ನ್ಯಾಯದ ಹಾದಿಯಲ್ಲಿ ತನ್ನ ಹಕ್ಕುಗಳಿಗಾಗಿ ಮತ್ತು ಈ ಸಮಾಜದ ಎಲ್ಲ ದಮನಿತರ ಹಕ್ಕುಗಳಿಗಾಗಿ ಕಾರ್ಯ ಪ್ರವೃತ್ತರಾಗಬೇಕು.
ದ್ವೇಷ ಸಿದ್ದಾಂತದ ವಕ್ತಾರರು ಇಸ್ಲಾಂ ಮತ್ತು ಮುಸ್ಲಿಮರ ಬಗ್ಗೆ ಜನಸಾಮಾನ್ಯರಲ್ಲಿ ಹರಡುತ್ತಿರುವ ದ್ವೇಷ ಮತ್ತು ಅಪನಂಬಿಕೆಗಳನ್ನು ಹೋಗಲಾಡಿಸಿ ಇಸ್ಲಾಂ ಮತ್ತು ಮುಸ್ಲಿಮರ ನೈಜ್ಯ ಪರಿಚಯವನ್ನು ದೇಶವಾಸಿಗಳಲ್ಲಿ ಮಾಡಲು ಮುಸ್ಲಿಂ ಸಮುದಾಯ ಕಾರ್ಯ ಪ್ರವೃತ್ತವಾಗಬೇಕು.
ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು, ಅದನ್ನು ಬಲಪಡಿಸಲು ಮತ್ತು ಮಾನವೀಯ ಮೌಲ್ಯಗಳ ಬುನಾದಿಯಡಿ ದೇಶವನ್ನು ಕಟ್ಟಲು ಮುಸ್ಲಿಂ ಸಮುದಾಯ ಎಲ್ಲರೊಂದಿಗೆ ಸೇರಿ ಹೋರಾಡ ಬೇಕು. ಮುಸ್ಲಿಮ್ ಸಮುದಾಯ ತನ್ನನ್ನು ರಾಜಕೀಯ, ಶೈಕ್ಷಣಿಕ, ಅರ್ಥಿಕ, ಸಾಮಾಜಿಕ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ತನ್ನನ್ನು ಸಬಲೀಕರಿಸುವ ಮೂಲಕ ಈ ದೇಶದ ನಿರ್ಮಾಣದಲ್ಲಿ ಪ್ರಧಾನ ಪಾತ್ರವಹಿಸಬೇಕೆಂದು ಈ ಸಮಾವೇಶ ದಲ್ಲಿ ಮಂಡಿಲಾದ ಠರಾವಿನಲ್ಲಿ ಒತ್ತಾಯಿಸಲಾಯಿತು.
ಜಗತ್ತಿನಾದ್ಯಂತ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿ ಶಕ್ತಿಗಳು ಹೊಂದಾಣಿಕೆ ಮಾಡಿಕೊಂಡು ತಮ್ಮ ಸ್ವಾರ್ಥಕ್ಕಾಗಿ ಮುಸ್ಲಿಮ್ ಸಮುದಾಯದ ಮೇಲೆ ಮಾಡುತ್ತಿರುವ ಮರ್ಧನ ಮತ್ತು ಅನುಸರಿಸುತ್ತಿರುವ ಧಮನಕಾರಿ ನೀತಿ ಮತ್ತು ಮುಸ್ಲಿಮ್ ಸಮುದಾಯವನ್ನು ರಾಜಕೀಯವಾಗಿ ನಿರ್ಲಕ್ಷಿಸಿ, ಕೇವಲ ಓಟ್ ಬ್ಯಾಂಕ್ ಆಗಿ ಬಳಸುವ ರಾಷ್ಟ್ರೀಯ ರಾಜಕೀಯ ಪಕ್ಷಗಳ ಪ್ರವೃತ್ತಿಯನ್ನು ತೀವ್ರವಾಗಿ ಖಂಡಿಸಲಾಯಿತು.







