ಶಾಲೆಯಲ್ಲಿ ಪ್ರಾಂಶುಪಾಲೆಯ ಗುಂಡಿಟ್ಟು ಹತ್ಯೆ

ಹೊಸದಿಲ್ಲಿ, ಮಾ.6: ಆಸ್ತಿ ವಿವಾದಕ್ಕೆ ಸಂಬಂಧಿಸಿ ಮೂವರು ವ್ಯಕ್ತಿಗಳು 45ರ ಹರೆಯದ ಪ್ರಾಂಶುಪಾಲೆಯನ್ನು ಶಾಲಾ ಆವರಣದ ಒಳಗೆಯೇ ಗುಂಡಿಟ್ಟು ಹತ್ಯೆ ಮಾಡಿದ ಘಟನೆ ಸೋಮವಾರ ದಿಲ್ಲಿ ಹೊರವಲಯದಲ್ಲಿ ನಡೆದಿದೆ.
ಇದಾದ ಗಂಟೆಗಳ ನಂತರ ಆಕೆಯ ಸೋದರನ ಮೃತದೇಹವು ಹರ್ಯಾಣದ ಜಜ್ಜರ್ ಜಿಲ್ಲೆಯ ಬಡ್ಸ ಗ್ರಾಮದಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಮನ್ ಹೆರ ಗ್ರಾಮದಲ್ಲಿರುವ ರಚನಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಅನಿತಾ ಯಾದವ್‌ರನ್ನು ಆಕೆಯ ಪತಿಯ ವ್ಯವಹಾರ ಜೊತೆಗಾರ ನವೀನ್ ಯಾದವ್ ನೇತೃತ್ವದ ದುಷ್ಕರ್ಮಿಗಳ ತಂಡ ಗುಂಡಿಟ್ಟು ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಸಹೋದರ ಜೈಕಿಶನ್ ಅವರ ಸಾವು ಕೂಡಾ ಇದೇ ಪ್ರಕರಣದ ಜೊತೆ ಸಂಬಂಧ ಹೊಂದಿರಬಹುದು ಎಂದು ಶಂಕಿಸಲಾಗಿದ್ದು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಸಮಯ ಅನಿತಾ ಶಾಲೆಯ ಆವರಣದಲ್ಲೇ ಇರುವ ತಮ್ಮ ನಿವಾಸದಲ್ಲಿದ್ದರು. ಮನೆಯ ಒಳಗೆ ಹೊಕ್ಕ ದುಷ್ಕರ್ಮಿಗಳು ಆಕೆಯ ಜೊತೆ ಆಸ್ತಿ ವಿಷಯದ ಕುರಿತು ಮಾತುಕತೆ ನಡೆಸಿದ್ದಾರೆ. ನಂತರ ಆಕೆಯ ಮೇಲೆ ಗುಂಡು ಹಾರಿಸಿದ್ದಾರೆ. ಕೊಲೆಗಾರರು ಅನಿತಾ ಅವರ ಮಗನ ಮೇಲೆಯೂ ಗುಂಡು ಹಾರಿಸಿದ್ದಾರೆ ಆದರೆ ಆತ ಅವರಿಂದ ತಪ್ಪಿಸಿಕೊಳ್ಳುವ ಮೂಲಕ ಪ್ರಾಣ ಉಳಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಶಾಲಾ ಕಟ್ಟಡದಲ್ಲಿ ಮಕ್ಕಳಿರಲಿಲ್ಲ. ಘಟನೆಯ ಒಂದು ಭಾಗವಷ್ಟೇ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







