ತ್ರಿಪುರ ಸಿಎಂ ಆಗಿ ಬಿಪ್ಲಬ್ ದೇಬ್ 9ರಂದು ಪ್ರಮಾಣವಚನ

ಅಗರ್ತಲ, ಮಾ.6: ಬಿಜೆಪಿಯ ತ್ರಿಪುರ ರಾಜ್ಯ ಘಟಕದ ಅಧ್ಯಕ್ಷ, 48ರ ಹರೆಯದ ಬಿಪ್ಲಬ್ ದೇಬ್‌ರನ್ನು ಮುಖಂಡನನ್ನಾಗಿ ಪಕ್ಷದ ಶಾಸಕರು ಆಯ್ಕೆ ಮಾಡಿದ್ದು ಮಾ.9(ಶುಕ್ರವಾರ)ರಂದು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆಯಿದೆ. ಹಿರಿಯ ಮುಖಂಡ ಜಿಷ್ಣು ದೆಬ್ಬರ್ಮ ಉಪಮುಖ್ಯಮಂತ್ರಿಯಾಗಿರುತ್ತಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಮುಖಂಡನ ಆಯ್ಕೆ ಪ್ರಕ್ರಿಯೆಯಲ್ಲಿ ವೀಕ್ಷಕರಾಗಿ ಉಪಸ್ಥಿತರಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಆಯ್ಕೆಯನ್ನು ಪ್ರಕಟಿಸಿದರು. ಗಡ್ಕರಿ ನೇತೃತ್ವದಲ್ಲಿ ತ್ರಿಪುರ ಬಿಜೆಪಿಯ ಶಾಸಕರು ರಾಜಭವನಕ್ಕೆ ತೆರಳಲಿದ್ದು, ಅಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಳಿಕ ಬಿಪ್ಲಬ್ ದೇಬ್ ಸರಕಾರ ರಚಿಸುವ ಹಕ್ಕು ಮಂಡಿಸುವರು. 60 ಸದಸ್ಯಬಲದ ರಾಜ್ಯ ವಿಧಾನಸಭೆಯಲ್ಲಿ 35 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆದಿರುವ ಬಿಜೆಪಿ, 25 ವರ್ಷದಿಂದ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷಗಳನ್ನು ಅಧಿಕಾರದಿಂದ ಕಿತ್ತೊಗೆದಿದೆ. ಬಿಜೆಪಿ ಮಿತ್ರಪಕ್ಷ 8 ಸ್ಥಾನ ಗಳಿಸಿದೆ.
ಬಿಪ್ಲಬ್ ದೇಬ್ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ. ತ್ರಿಪುರದಲ್ಲಿ ಬಿಜೆಪಿ ಮಿತ್ರ ಪಕ್ಷವಾಗಿರುವ ಐಪಿಎಫ್‌ಟಿ ಬುಡಕಟ್ಟು ಸಮುದಾಯದವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿಕೆ ನೀಡಿತ್ತಾದರೂ, ಹೆಚ್ಚಿನ ಶಾಸಕ ಬಲ ಹೊಂದಿಲ್ಲದ ಕಾರಣ ಹಕ್ಕೊತ್ತಾಯ ಮಂಡಿಸಲು ಮುಂದಾಗಲಿಲ್ಲ. ಆದ್ದರಿಂದ ಬಿಪ್ಲಬ್ ದೇಬ್ ಆಯ್ಕೆಗೆ ದಾರಿ ಸುಗಮವಾಗಿದೆ.





