ಮದ್ಯಪಾನದಿಂದ ದೂರ ಉಳಿದರೆ ಸ್ವಾಸ್ಥ ಸಮಾಜ ನಿರ್ಮಾಣ: ರಮೇಶ್

ಉಡುಪಿ, ಮಾ.6: ಇಂದಿನ ಆಧುನಿಕ ಯುಗದಲ್ಲಿ ಯುವ ಜನತೆ ಮದ್ಯ ಪಾನ, ಮಾದಕ ದ್ರವ್ಯಗಳಂತಹ ದುಶ್ಚಟಗಳ ದಾಸರಾಗುತ್ತಿದ್ದು, ಇದರಿಂದ ಸಮಾಜದ ಸ್ವಾಸ್ಥ್ಯವನ್ನು ಹಾಳಾಗುತ್ತಿದೆ. ಇಂತಹ ಚಟಗಳಿಂದ ದೂರ ಇರುವು ದರಿಂದ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎನ್.ರಮೇಶ್ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಆಶ್ರಯದಲ್ಲಿ ಉಡುಪಿ ಜಿಲ್ಲಾಡಳಿತ ಹಾಗೂ ತಿಪಟೂರು ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಉಡುಪಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಮಂಗಳವಾರ ಆಯೋಜಿಸಲಾದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪ ರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿ ಅನೇಕ ಅಪರಾಧಗಳು ಮದ್ಯಪಾನ ವ್ಯಸನಿಯಿಂದಲೇ ನಡೆಯುತ್ತಿರುತ್ತದೆ. ಇದು ಸಂಸಾರ, ಸಮಾಜ ಹಾಗೂ ದೇಶಕ್ಕೆ ಕೆಟ್ಟ ದುಷ್ಪ ರಿಣಾಮ ಬೀರುತ್ತಿವೆ. ಆದುದರಿಂದ ಯುವಜನತೆ ಮತ್ತು ವಿದ್ಯಾರ್ಥಿ ಸಮೂಹಕ್ಕೆ ಮದ್ಯಪಾನ, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಮದ್ಯಪಾನ ಮಾಡುವುದು ಇಂದಿನ ದಿನಗಳಲ್ಲಿ ಒಂದು ಬಗೆಯ ಫ್ಯಾಶನ್ ಆಗಿದ್ದು, ಮಹಿಳೆಯರು ಕೂಡ ಇಂಥ ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮದ್ಯಪಾನ ಸೇವನೆಯಿಂದ ತಮಗೆ ಅರಿವು ಇಲ್ಲದೆ ಅನೇಕ ಅಪರಾಧ ಕೃತ್ಯಗಳು ನಡೆದು ಹೋಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ವಹಿಸಿದ್ದರು. ಈ ಸಂದರ್ಭದಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ನಿರಂಜನ್ ಭಟ್ ಸ್ವೀಪ್ ಚಟುವಟಿಕೆಗೆ ಪೂರಕವಾಗಿ ಮತದಾನದ ಹಕ್ಕನ್ನು ತಿಳಿಯಪಡಿಸುವ ಪ್ರತಿಜ್ಞಾ ವಿಧಿ ಬೋಧಿಸಿದರು.
ಮುಖ್ಯಅತಿಥಿಗಳಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪುರುಷೋತ್ತಮ್ ಪಿ.ಕೆ., ಯೋಜನಾಧಿಕಾರಿ ಮಾಲತಿ ದಿನೇಶ್, ಹರೀಶ್ ಶೆಟ್ಟಿ ಚೆರ್ಕಾಡಿ, ಉಡುಪಿ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ರಾಮ್‌ರಾವ್, ಮಹಿಳಾ ಠಾಣಾಧಿಕಾರಿ ಕಲ್ಪನಾ ಮೊದಲಾದವರು ಉಪಸ್ಥಿತರಿದ್ದರು.
ಯೋಜನೆ ಮೇಲ್ವಿಚಾರಕ ಪ್ರೇಮ್ ಪ್ರಸಾದ್ ಸ್ವಾಗತಿಸಿದರು. ವಿಜಯ ಕೆ. ವಂದಿಸಿದರು. ಸಂಯೋಜಕ ರಾಜಶೇಖರ್ ಕೆ. ಕಾರ್ಯಕ್ರಮ ನಿರೂಪಿಸಿದರು







