ಹಂದಟ್ಟು ಪರ್ಯಾಯ ದೇವಸ್ಥಾನದ ಕಾಮಗಾರಿ ಸ್ಥಗಿತ: ಡಾ.ವೇದಮೂರ್ತಿ
ಎಸ್‌ಸಿ-ಎಸ್‌ಟಿ ಕುಂದುಕೊರತೆಗಳ ಅಹವಾಲು ಸ್ವೀಕಾರ

ಉಡುಪಿ, ಮಾ.6: ಕೋಟತಟ್ಟು ಗ್ರಾಮದ ಹಂದಟ್ಟು ಎಂಬಲ್ಲಿರುವ ದೈವ ಸ್ಥಾನಕ್ಕೆ ಪರ್ಯಾಯವಾಗಿ 400 ಮೀಟರ್ ದೂರದಲ್ಲಿ ನಿರ್ಮಿಸಲಾಗುತ್ತಿರುವ ದೇವಸ್ಥಾನದ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಮಂಗಳೂರು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಡಾ.ಸಿ.ಬಿ. ವೇದಮೂರ್ತಿ ತಿಳಿಸಿದ್ದಾರೆ.
ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಉಡುಪಿ ತಾಲೂಕಿನ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಕುಂದುಕೊರತೆಗಳ ಅಹವಾಲು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಸಭೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ್ ಗಿಳಿ ಯಾರು ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಡಾ.ವೇದ ಮೂರ್ತಿ, ದೈವಸ್ಥಾನದಲ್ಲಿ ಅಸ್ಪಶ್ಯ ಜಾತಿಯ ಅರ್ಚಕರೆಂಬ ಕಾರಣಕ್ಕೆ ಸವರ್ಣಿ ಯರು ಅದೇ ಹೆಸರಿನಲ್ಲಿ ಮತ್ತೊಂದು ದೇವಸ್ಥಾನವನ್ನು ಪರ್ಯಾಯವಾಗಿ ನಿರ್ಮಿಸುತ್ತಿರುವ ವಿಚಾರ ಪತ್ರಿಕೆಯ ಮೂಲಕ ತಿಳಿದು ಎಸ್ಪಿ ಹಾಗೂ ಸ್ಥಳೀಯ ವೃತ್ತ ನಿರೀಕ್ಷಕರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದೇನೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ದೇವಸ್ಥಾನಕ್ಕೆ ಸ್ಥಳೀಯ ಗ್ರಾಪಂ ಪರವಾನಿಗೆ ನೀಡಿಲ್ಲ ಮತ್ತು ಪಂಚಾಂಗದ ಮಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿರುವ ವಿಚಾರ ತಿಳಿದುಬಂದಿದೆ. ಈ ಬಗ್ಗೆ ತನಿಖೆ ಮುಂದುವರೆಸ ಲಾಗಿದೆ ಎಂದರು.
ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಶೇ.24.1 ಪರಿಶಿಷ್ಟ ಜಾತಿ ಮತ್ತು ಪರಿ ಶಿಷ್ಟ ಪಂಗಡದ ಕಾರ್ಯಕ್ರಮಗಳ ಪರಿಶೀಲನೆಗಾಗಿ ಈ ಸಭೆಯನ್ನು ಕರೆಯ ಲಾಗಿದ್ದು, ಕಾರ್ಯಕ್ರಮ ಪೂರ್ಣಗೊಳ್ಳದಿದ್ದಲ್ಲಿ ಈ ತಿಂಗಳೊಳಗೆ ಶೇ.100 ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆವರ್ತ ನಿಧಿಯನ್ನು ಮುಂದಿನ ವರ್ಷ ಬಳಸಿಕೊಳ್ಳುವಂತೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮಗಳ ಕಾಮಗಾರಿಗಳ ಬಗ್ಗೆ ಮತ್ತು ಆಯಾ ಗ್ರಾಪಂಗಳಲ್ಲಿ ಅದನ್ನು ಬಳಕೆ ಮಾಡಿರುವ ಕುರಿತು ಜನರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾಮಗಾರಿಗಳ ವಿವರವನ್ನು ಸಾರ್ವಜನಿಕವಾಗಿ ಫ್ಲೆಕ್ಸ್‌ಗಳ ಅಥವಾ ಕಚೇರಿಯ ನೋಟೀಸ್ ಬೋರ್ಡ್‌ಗಳ ಮೂಲಕ ತಿಳಿಸುವ ಕಾರ್ಯ ಮಾಡಬೇಕು. ಇದ ರಿಂದ ಯಾವುದೇ ಕಾಮಗಾರಿಯಲ್ಲಿ ನಡೆಯುವ ಅವ್ಯವಹಾರ ಜನರಿಗೆ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದಂತೆ ಉಡುಪಿ ತಾಲೂಕಿ ನಲ್ಲಿ ಎಂಟು ಹಾಗೂ ಕಾರ್ಕಳ ತಾಲೂಕಿನಲ್ಲಿ ಆರು ದೂರುಗಳನ್ನು ಸ್ವೀಕರಿಸ ಲಾಗಿದೆ. ಇಂದಿನ ಸಭೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಗದ ಹಿನ್ನೆಲೆ ಯಲ್ಲಿ ಮತ್ತು ಶೇ.50 ಅಧಿಕಾರಿಗಳು ಭಾಗವಹಿಸದ ಕಾರಣ ಮುಂದಿನ ಚುನಾ ವಣೆ ಒಳಗೆ ಮತ್ತೊಮ್ಮೆ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆಯಲಾಗುವುದು ಎಂದು ಅವರು ತಿಳಿಸಿದರು.
ದಲಿತ ಮುಖಂಡ ಸುಂದರ ಮಾಸ್ಟರ್ ನಗರಸಭೆಯ ಎಸ್‌ಸಿಎಸ್‌ಟಿ ಅನು ದಾನವನ್ನು ವೆಬ್‌ಸೈಟ್‌ಗೆ ದುರ್ಬಳಕೆ ಮಾಡಿರುವುದಾಗಿ ದೂರಿದರು. ಹಿರಿಯಡ್ಕ ಸಹಕಾರಿ ಬ್ಯಾಂಕಿನ ಉದ್ಯೋಗಿ ಸುಜಾತ ಕರ್ತವ್ಯದ ಸಂದರ್ಭದಲ್ಲಿ ಮೇಲಾ ಧಿಕಾರಿಗಳ ಮಾನಸಿಕ ಕಿರುಕುಳದ ಕುರಿತು ದೂರು ನೀಡಿದರು. ಈಗಾಗಲೇ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾವು ಕೂಡ ಆ ಬಗ್ಗೆ ತನಿಖೆ ಮಾಡುತ್ತೇವೆ ಎಂದು ವೇದಮೂರ್ತಿ ಹೇಳಿದರು.
ಸ್ವಉದ್ಯೋಗ ನಡೆಸಲು ಬ್ರಹ್ಮಾವರ ಪರಿಸರದಲ್ಲಿ ಕಳೆದ ಐದು ವರ್ಷಗಳಿಂದ ಅಂಗಡಿ ಹುಡುಕಾಟ ನಡೆಸುತ್ತಿದ್ದು, ಈವರೆಗೆ ಅಂಗಡಿ ಕೋಣೆ ಸಿಕ್ಕಿಲ್ಲ. ಇದಕ್ಕೆ ಗ್ರಾಪಂ ಕಟ್ಟಡಗಳ ಕೋಣೆ ನೀಡುವಾಗ ಮೀಸಲಾತಿ ಕಲ್ಪಿಸಬೇಕು ಎಂದು ವಿಜಯಲಕ್ಷ್ಮೀ ಮನವಿ ಮಾಡಿದರು. ಈ ಕುರಿತು ಅರ್ಜಿ ನೀಡಿದರೆ ಪರಿಶೀಲಿಸ ಲಾಗುವುದು ಎಂದು ವೇದಮೂರ್ತಿ ಪ್ರತಿಕ್ರಿಯಿಸಿದರು.
ಸಭೆಯಲ್ಲಿ ದಲಿತ ನಾಯಕ ರಮೇಶ್ ಕೋಟ್ಯಾನ್, ಉಡುಪಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಎಸ್.ಎನ್.ರಮೇಶ್ ಮೊದಲಾದವರು ಉಪಸ್ಥಿತರಿದ್ದರು.
ನಕಲಿ ಜಾತಿ ಪ್ರಮಾಣಪತ್ರ: ತಹಶೀಲ್ದಾರ್ ವಿರುದ್ಧವೂ ಪ್ರಕರಣ
ನಕಲಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶನಾಲಯಕ್ಕೆ ದೂರು ನೀಡಬಹುದಾಗಿದೆ. ಮುಂದೆ ಪ್ರಮಾಣ ಪತ್ರ ನೀಡುವಾಗ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಿಗ ಸರಿಯಾಗಿ ಪರಿಶೀಲನೆ ಮಾಡಿ ತಿಳಿದುಕೊಂಡು ಜಾತಿ ಪ್ರವಾಣಪತ್ರ ನೀಡುವಂತೆ ಸೂಚಿಸಲಾಗಿದೆ. ಉದ್ದೇಶಪೂರ್ವಕವಾಗಿ ನಕಲಿ ಜಾತಿ ಪ್ರಮಾಣಪತ್ರ ನೀಡಿದರೆ ತಹಶೀಲ್ದಾರ್ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಿಸಲಾಗುವುದು. ನಕಲಿ ಜಾತಿ ಪ್ರಮಾಣಪತ್ರ ನೀಡಿದವರು ಹಾಗೂ ಪಡೆದುಕೊಂಡವರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದು ಡಾ.ವೇದಮೂರ್ತಿ ತಿಳಿಸಿದರು.







