ಉಡುಪಿ: ಸ್ವೀಪ್ ಸಮಿತಿ ಸಭೆ
ಉಡುಪಿ, ಮಾ.6: ಸುಭದ್ರ ಪ್ರಜಾಪ್ರಭುತ್ವಕ್ಕೆ ಸರ್ವರ ಪಾಲ್ಗೊಳ್ಳುವಿಕೆ ಖಾತರಿ ಪಡಿಸಿಕೊಳ್ಳಲು, ಮತದಾನ ನಮ್ಮ ಹಕ್ಕೆಂಬುದನ್ನು ಎಲ್ಲರಿಗೂ ತಿಳಿಸಲು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ ಅವರ ಅಧ್ಯಕ್ಷತೆಯಲ್ಲಿ ಸ್ವೀಪ್ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಸಭೆ ಮಂಗಳವಾರ ಸಿಇಒ ಅಧ್ಯಕ್ಷತೆಯಲ್ಲಿ ಮಣಿಪಾಲದ ಜಿಪಂ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ತಾಲೂಕು ಮಟ್ಟದ ಸಮಿತಿ ಹಾಗೂ ಚುನಾವಣೆ ಘೋಷಣೆಗೂ ಮುಂಚೆ ಕೈಗೊಳ್ಳಬೇಕಾದ ಸ್ವೀಪ್ ಚಟುವಟಿಕೆ ಕುರಿತು ವಿಸ್ತೃತ ಚರ್ಚೆ ನಡೆಯಿತು. ಈಗಾಗಲೇ ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನ ದಂತೆ ತಾಲೂಕು ಮಟ್ಟದ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲೇ ಕ್ಯಾಂಪಸ್ ಅಂಬಾಸಿಡರ್ಸ್‌ಗಳ ಸಭೆಯನ್ನು ಕರೆಯಲು ನಿರ್ಧರಿಸಲಾಯಿತು.
ಈಗಾಗಲೇ ವಿವಿಧ ಇಲಾಖೆಗಳ ಸಭೆಗಳಲ್ಲಿ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಗುತ್ತಿದ್ದು, ಮಾ.8ರಂದು ಮಹಿಳಾ ಸಬಲೀಕರಣ ಮತ್ತು ನೈತಿಕ ಮತದಾನದ ಬಗ್ಗೆಯೂ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಅದೇ ದಿನ ಬೆಳಗ್ಗೆ ವಳಕಾಡಿನಲ್ಲಿ ಮುಖ್ಯ ಶಿಕ್ಷಕರ ಸಬೆಯಲ್ಲಿ ಸ್ವೀಪ್ ಚಟುವಟಿಕೆ ಕುರಿತು ಸಿಇಒ ಶಿವಾನಂದ ಕಾಪಶಿ ಅವರು ವಿವರಿಸಲಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರ ಮತ್ತು ಹಿಂದುಳಿದ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮೊರಾರ್ಜಿ ದೇಸಾಯಿ ಶಾಲೆ, ವಸತಿ ಶಾಲೆಗಳಲ್ಲಿ ಆಯೋಜಿಸಲಾದ ಹೆತ್ತವರ ಸಭೆಯಲ್ಲೂ ಮತದಾನದ ಮಹತ್ವವನ್ನು ಬೋಧಿಸುವ ಸಭೆಯನ್ನು ನಡೆಸಲಾಗಿದೆ.
ಎಲ್ಲ ಇಲಾಖೆಗಳು ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಸಿಇಒ ಸೂಚಿಸಿದರು. ಸಭೆಯಲ್ಲಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







