ಎನರ್ಜಿ ಡ್ರಿಂಕ್ ಕುಡಿಯುವ ಮುನ್ನ ನೀವು ಈ ಸುದ್ದಿ ಓದಲೇಬೇಕು

ಮೂಡಿಗೆರೆ, ಮಾ.6: ಪಟ್ಟಣದ ಸೂಪರ್ ಮಾರ್ಕೆಟ್‍ನಲ್ಲಿ ರೆಡ್‍ಬುಲ್ ಎನರ್ಜಿ ಡ್ರಿಂಕ್ ಕುಡಿದು ವ್ಯಕ್ತಿಯೊಬ್ಬ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೋಮವಾರ ವರದಿಯಾಗಿದೆ.
ಪಟ್ಟಣದಲ್ಲಿರುವ ಸೂಪರ್ ಮಾರ್ಕೆಟ್ ಒಂದರಲ್ಲಿ ಪಟ್ಟಣದ ನಿವಾಸಿ ಅಮರ್ ನಾಥ್ ಎಂಬವರು ರವಿವಾರ ರೆಡ್‍ಬುಲ್ ಎನರ್ಜಿ ಡ್ರಿಂಕ್ ಖರೀದಿಸಿ ಸೇವಿಸಿದ್ದಾರೆಂದು ತಿಳಿದು ಬಂದಿದ್ದು, ಸೇವನೆಯ ಬಳಿಕ ತೀವ್ರ ಹೊಟ್ಟೆನೋವಿನಿಂದ ನರಳಾಡಿದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತೆಂದು ತಿಳಿದುಬಂದಿದೆ.
ವ್ಯಕ್ತಿ ಅಸ್ವಸ್ಥರಾದ ಸುದ್ದಿಯಿಂದ ಎಚ್ಚೆತ್ತ ಆಹಾರ ಇಲಾಖೆ, ಸೂಪರ್ ಮಾರ್ಕೆಟ್‍ನಲ್ಲಿ ನಕಲಿ ಎನರ್ಜಿ ಡ್ರಿಂಕ್‍ಗಳ ಮಾರಾಟ ಮಾಡಲಾಗುತ್ತಿದೆ ಎಂಬ ಶಂಕೆ ಮೇಲೆ ತಾಲೂಕು ಆಹಾರ ಇಲಾಖೆಯ ನಿರೀಕ್ಷಕ ಸುಂದರೇಶ್ ಹಾಗೂ ಆಹಾರ ಸುರಕ್ಷಾ ಮತ್ತು ಗುಣಮಟ್ಟ ನಿಯಂತ್ರಣಾಧಿಕಾರಿ ಸುರೇಶ್ ಸೂಪರ್ ಮಾರ್ಕೆಟ್‍ಗೆ ಭೇಟಿ ನೀಡಿ ರೆಡ್‍ಬುಲ್ ಎನರ್ಜಿ ಡ್ರಿಂಕ್‍ಗಳ ಮಾದರಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಟಿನ್ ಮೇಲೆ ಬೆಲೆ, ಬಾರ್‍ಕೋಡ್ ದಾಖಲಾಗದಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಹಾರ ನಿರೀಕ್ಷಕರು ವಶಕ್ಕೆ ಪಡೆದ ರೆಡ್‍ಬುಲ್ ಎನರ್ಜಿ ಡ್ರಿಂಕ್ ಮಾದರಿಗಳನ್ನು ಮೈಸೂರಿನ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.





