ಚಿಕ್ಕಮಗಳೂರು: ಬೆಂಕಿಗಾಹುತಿಯಾಗುತ್ತಿರುವ ಅರಣ್ಯ ಸಂಪತ್ತು; ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

ಚಿಕ್ಕಮಗಳೂರು ಮಾ.6: ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿ, ಚುರ್ಚೆಗುಡ್ಡ ಮೀಸಲು ಅರಣ್ಯ ಸೇರಿದಂತೆ ಜಿಲ್ಲೆಯ ಹಲವು ಅರಣ್ಯ ಪ್ರದೇಶಗಳು ಕಾಡ್ಗಿಚ್ಚು ಹಾಗೂ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಆಹುತಿಯಾಗುತ್ತಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯ ಚಾರ್ಮಾಡಿಘಾಟ್ ಸೇರಿದಂತೆ ಮುತ್ತೋಡಿ ಅಭಯಾರಣ್ಯ, ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ಶ್ರೇಣಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದು, ಹತೋಟಿಗೆ ಬಾರದ ಬೆಂಕಿಯ ಕೆನ್ನಾಲಿಗಗೆ ಸಿಲುಕಿ ಜಿಲ್ಲೆಯ ಪಾಕೃತಿ ಸೌಂದರ್ಯಕ್ಕೆ ಶೋಭೆಯಾಗಿದ್ದ ಅಮೂಲ್ಯ ಶೋಲಾ ಕಾಡುಗಳು ಮತ್ತು ನೂರಾರು ಎಕರೆ ಹುಲ್ಲುಗಾವಲು ಸುಟ್ಟು ಕರಕಲಾಗುತ್ತವೆ.
ಕಳೆದೊಂದು ವಾರದಿಂದ ಮುಳ್ಳಯ್ಯನಗಿರಿ ಶ್ರೇಣಿಗೆ ಹೊಂದಿಕೊಂಡಿಒರುವ ಇಡೀ ಚಂದ್ರದ್ರೋಣ ಪರ್ವತವು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದು, ಪರ್ವತ ಶ್ರೇಣಿಗಳಿಗೆ ಬೆಂಕಿಯ ಹಾರ ಹಾಕಿದಂತೆ ರಾತ್ರಿಯೆಲ್ಲ ನಗರ ಪ್ರದೇಶಕ್ಕೆ ಎದ್ದು ಕಾಣುತ್ತಿದ್ದು, ಬೆಂಕಿಯ ತೀವ್ರತೆ ಇನ್ನೂ ಹೆಚ್ಚುತ್ತಿದೆ. ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಂಕಿ ಹಬ್ಬಿರುವುದರಿಂದ ವನ್ಯಜೀವಿಗಳು ದಿಕ್ಕೆಟ್ಟು ಕಂಗಾಲಾಗಿವೆ. ಶೋಲಾ ಕಾಡುಗಳನ್ನೇ ಆಶ್ರಯಿಸಿ ಬದುಕುತ್ತಿರುವ, ನೆಲದಲ್ಲೇ ಗೂಡುಕಟ್ಟಿ ಮೊಟ್ಟೆ ಇಡುವ ಅನೇಕ ಪಕ್ಷಿಗಳು, ಕಪ್ಪೆ, ಹಾವು, ಚಿಟ್ಟೆ ಮತ್ತಿತರ ವನ್ಯಜೀವಿಗಳು ಬೆಂಕಿಯ ಕನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿವೆ.
ಬೆಂಕಿಯ ಕೆನ್ನಾಲಿಗೆಯಿಂದ ನಿತ್ರಾಣಗೊಂಡ ಕಡವೆ ಮರಿಯೊಂದು ಬೆಂಕಿಯಿಂದ ತಪ್ಪಿಸಿಕೊಳ್ಳುವ ಬರದಲ್ಲಿ ಹೊನ್ನಮನಹಳ್ಳ ಜಲಪಾತದ ಬಳಿ ಮೇಲಿಂದ ಬಿದ್ದು ಜೀವಬಿಟ್ಟಿರುವ ಘಟನೆ ಸೋಮವಾರ ವರದಿಯಾಗಿದೆ. ಅತ್ತಿಗುಂಡಿ ಬಳಿಯ ಹೊನ್ನಮನಹಳ್ಳ ಮೇಲ್ಬಾಗ ಹಾಗೂ ಮಾಣಿಕ್ಯಧಾರ ಬೆಟ್ಟಸಾಲುಗಳಲ್ಲಿ ಕಳೆದ ಶನಿವಾರ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡು ರಾತ್ರಿಯೆಲ್ಲ ಹೊತ್ತಿ ಉರಿದಿತ್ತು. ಬೆಂಕಿಯ ಜ್ವಾಲೆಗೆ ಸಿಲುಕಿ ಸಾಕಷ್ಟು ವನ್ಯಜೀವಿಗಳು ಮತ್ತು ಸರಿಸೃಪಗಳು ಬಲಿಯಾಗಿರುವ ಬಗ್ಗೆ ಪರಿಸರ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಟ್ಟು ಕರಕಲಾದ ಸಸ್ಯ ಸಮೂಹ: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕಂಡುಬರುವ ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ಔಷಧಿ ಸಸ್ಯಗಳು ಮತ್ತು ಹನ್ನೆರಡು ವರ್ಷಗಳಿಗೊಮ್ಮೆ ಹೂ ಬಿಡುವ ಅಪರೂಪದ ನೀಲ ಕುರಂಜಿ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ. ಬಿಸಿಲ ಧಗೆಗೆ ಒಣಗಿ ನಿಂತ ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿವೆ. ನೀರಿನ ಉಗಮಕ್ಕೆ ಕಾರಣವಾದ ಹುಲ್ಲುಗಾವಲು ಮತ್ತು ಶೋಲಾ ಕಾಡುಗಳು ಸುಟ್ಟು ಹೋಗಿರುವುದರಿಂದ ಗಿರಿಸಾಲಿನ ನೀರಿನ ಮೂಲಗಳೂ ಕೂಡ ನಾಶವಾಗುವ ಬೀತಿಯಲ್ಲಿವೆ.
ಮುಂಜಾಗ್ರತ ಕ್ರಮ ಕೈಗೊಳ್ಳದ ಅಧಿಕಾರಿಗಳು: ಮುಳ್ಳಯ್ಯನಗಿರಿ, ಬಾಬಾ ಬುಡನ್‍ಗಿರಿ ಸೇರಿದಂತೆ, ಚುರ್ಚೆಗುಡ್ಡ ಮೀಸಲು ಅರಣ್ಯ ಇನ್ನಿತರ ಅರಣ್ಯ ಪ್ರದೇಶಗಳಲ್ಲಿ ದಿನೇ ದಿನೇ ಬೆಂಕಿ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ತಲೆಕೆಡಿಸಿಕೊಂಡಿಲ್ಲ. ಬೇಸಿಗೆ ಕಾಲದಲ್ಲಿ ಬೆಂಕಿಯಿಂದ ಅರಣ್ಯವನ್ನು ರಕ್ಷಿಸುವ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಿಲ್ಲ. ಬೆಂಕಿ ನಂದಿಸಲು ಮತ್ತು ಬೆಂಕಿ ಬೀಳದಂತೆ ನೋಡಿಕೊಳ್ಳಲು ಅಗತ್ಯವಿರುವಷ್ಟು ಸಂಖ್ಯೆಯ ಅರಣ್ಯ ಬೆಂಕಿ ವೀಕ್ಷಕರನ್ನು ನೇಮಿಸಿಕೊಂಡಿಲ್ಲ. ಉದ್ದೇಶಪೂರ್ವಕವಾಗಿ ಬೆಂಕಿ ಹಾಕುವ ಕಿಡಿಗಳನ್ನು ಹಿಡಿದು ಪ್ರಕರಣ ದಾಖಲಿಸಲು ಕ್ರಮವಹಿಸಿಲ್ಲ ಎಂದು ಜಿಲ್ಲೆಯ ಪರಿಸರ ಪ್ರಿಯರು ಆರೋಪಿಸಿದ್ದಾರೆ.







