ತ್ರಿಕೋನ ಟ್ವೆಂಟಿ-20: ಶ್ರೀಲಂಕಾಕ್ಕೆ 175 ರನ್ ಗುರಿ ನೀಡಿದ ಭಾರತ
ಆರಂಭಿಕ ದಾಂಡಿಗ ಶಿಖರ್ ಧವನ್ ಅರ್ಧಶತಕ

ಕೊಲಂಬೊ, ಮಾ.6: ಆರಂಭಿಕ ದಾಂಡಿಗ ಶಿಖರ್ ಧವನ್ ಅರ್ಧಶತಕದ ಕೊಡುಗೆಯ ನೆರವಿನಿಂದ ಭಾರತ ತಂಡ ಶ್ರೀಲಂಕಾ ತಂಡಕ್ಕೆ ತ್ರಿಕೋನ ಟ್ವೆಂಟಿ-20 ಸರಣಿಯ ಮೊದಲ ಪಂದ್ಯದ ಗೆಲುವಿಗೆ 175 ರನ್ ಗುರಿ ನೀಡಿದೆ.
ಇಲ್ಲಿನ ಪ್ರೇಮದಾಸ್ ಸ್ಟೇಡಿಯಂನಲ್ಲಿ ಮಂಗಳವಾರ ಟಾಸ್ ಜಯಿಸಿದ ಶ್ರೀಲಂಕಾದ ನಾಯಕ ದಿನೇಶ್ ಚಾಂಡಿಮಾಲ್ ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.
ಭಾರತ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು.
ಇನಿಂಗ್ಸ್‌ನ ನಾಲ್ಕನೇ ಎಸೆತದಲ್ಲಿ ನಾಯಕ ರೋಹಿತ್ ಶರ್ಮ(0)ಹಾಗೂ 2ನೇ ಓವರ್‌ನಲ್ಲಿ ಸುರೇಶ್ ರೈನಾ(1) ವಿಕೆಟ್ ಕಳೆದುಕೊಂಡ ಭಾರತ ಕಳಪೆ ಆರಂಭ ಪಡೆಯಿತು. ಆಗ ತಂಡಕ್ಕೆ ಆಸರೆಯಾದ ಧವನ್(90 ರನ್, 49 ಎಸೆತ, 6 ಬೌಂಡರಿ, 6 ಸಿಕ್ಸರ್) ಮನೀಷ್ ಪಾಂಡೆ(37, 35 ಎಸೆತ, 3 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 3ನೇ ವಿಕೆಟ್‌ಗೆ 95 ರನ್ ಜೊತೆಯಾಟ ನಡೆಸಿದರು.
ಪಾಂಡೆ ಔಟಾದ ಬಳಿಕ ರಿಷಬ್ ಪಂತ್(23) ಅವರೊಂದಿಗೆ 4ನೇ ವಿಕೆಟ್‌ಗೆ 49 ರನ್ ಸೇರಿಸಿದ ಧವನ್ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. 90 ರನ್‌ಗೆ ಗುಣತಿಲಕಗೆ ವಿಕೆಟ್ ಒಪ್ಪಿಸಿದ ಧವನ್ ಚೊಚ್ಚಲ ಟ್ವೆಂಟಿ-20 ಶತಕದಿಂದ ವಂಚಿತರಾದರು. ಆದರೆ, ಟ್ವೆಂಟಿ-20ಯಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ದಾಖಲಿಸಿದರು.
ದಿನೇಶ್ ಕಾರ್ತಿಕ್ ಔಟಾಗದೆ 13 ರನ್ ಗಳಿಸಿದರು. ಶ್ರೀಲಂಕಾದ ಪರ ಚಾಮೀರ(2-31) ಎರಡು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರು. ಫೆರ್ನಾಂಡೊ, ಮೆಂಡಿಸ್ ಹಾಗೂ ಗುಣತಿಲಕ ತಲಾ ಒಂದು ವಿಕೆಟ್ ಪಡೆದರು.







