ಸಕಲ ಸೌಲಭ್ಯವಿರುವ ಮಾದರಿ ಜಿಲ್ಲಾ ಆಸ್ಪತ್ರೆ ನಿರ್ಮಾಣ: ವಿನಯ್ ಕುಲಕರ್ಣಿ

ಧಾರವಾಡ, ಮಾ.6: ಉತ್ತಮ ಸೌಲಭ್ಯಗಳನ್ನು ಹಾಗೂ ಉನ್ನತ ಉಪಕರಣಗಳನ್ನು ಹೊಂದಿರುವ ದೂಳು ಮುಕ್ತ ಹಸಿರು ಉದ್ಯಾನ ಉಳ್ಳ ಮಾದರಿ ಎನಿಸುವ ಜಿಲ್ಲಾ ಆಸ್ಪತ್ರೆಯನ್ನು ನಿರ್ಮಿಸುವುದು ನನ್ನ ಗುರಿಯಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ ಯೋಜನೆ ಅಡಿಯಲ್ಲಿ, ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂರು ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ನೆರವೆರಿಸಿ ಅವರು ಮಾತನಾಡಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 100 ಹಾಸಿಗೆಗಳ ಮಹಿಳಾ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು 26.15 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಬಡವರಿಗೆ ಹಾಗೂ ಗ್ರಾಮೀಣ ಜನರಿಗೆ ಉಪಯುಕ್ತವಾಗುವ ಆಧುನಿಕ ಸಿಟಿಸ್ಕ್ಯಾನ್ ಮಷೀನ್‌ಅನ್ನು ಅಳವಡಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗುವ ಒಳರೋಗಿಗಳಿಗೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ವೈದ್ಯಾಧಿಕಾರಿಗಳ ನಾಲ್ಕು ವಸತಿ ಗೃಹ, ಶುಶ್ರೂಷಕಿಯರ ಆರು ವಸತಿ ಗೃಹ, ಮತ್ತು ಗ್ರೂಪ್ ‘ಡಿ’ ಸಿಬ್ಬಂದಿಗಳ ನಾಲ್ಕು ವಸತಿ ಗೃಹಗಳು ನಿರ್ಮಾಣ ವಾಗುತ್ತಿವೆ. ಆಸ್ಪತ್ರೆಯ ನೆಲಮಹಡಿಯಲ್ಲಿ ಹೊರರೋಗಿಗಳ ವಿಭಾಗ, ಕ್ಷ-ಕಿರಣ ಭಾಗ, ವೈದ್ಯರ ಕೊಠಡಿಗಳು, ಔಷಧ ವಿತರಣಾ ವಿಭಾಗ, ಪ್ರಯೋಗಾಲಯ, 24 ಹಾಸಿಗೆಗಳ ವಾರ್ಡ್ ವಿಭಾಗ, ಪ್ರಸೂತಿ ವಿಭಾಗ, ಅಲ್ಟ್ರಾಸೌಂಡ್ ಹಾಗೂ ಶೌಚಾಲಯಗಳನ್ನು ಒಳಗೊಂಡಿದೆ ಎಂದು ವಿನಯ್ ಕುಲಕರ್ಣಿ ತಿಳಿಸಿದರು.
ನಾಲ್ಕು ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದ್ದು, ಉಚಿತ ಸೇವೆ ನೀಡಲಾಗುತ್ತಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ತಿಂಗಳ ಅಂತ್ಯದಲ್ಲಿ ಇನ್ನೂ ಆರು ಹೊಸ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಶಸ್ತ್ರ ಚಿಕಿತ್ಸಾ ಸಂಕೀರ್ಣವನ್ನು ಆಧುನಿಕವಾಗಿ ನವೀಕರಣ ಮಾಡಿದ್ದು ಶಸ್ತ್ರ ಚಿಕಿತ್ಸೆ ಮಾಡುವ ಸೌಲಭ್ಯ ಹಾಗೂ ಕ್ಷಮತೆಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ಎಂ.ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಗಿರಿಧರ್ ಆರ್.ಕುಕನೂರ, ಸ್ಥಾನಿಕ ವೈದ್ಯಾಧಿಕಾರಿ ಡಾ.ಸಿ.ಆರ್.ನಾಡಗೌಡ, ವಿವಿಧ ಭಾಗಗಳ ಮುಖ್ಯಸ್ಥರಾದ ಡಾ.ಎಸ್.ಬಿ.ಕಟಕೋಳ, ಆಸ್ಪತ್ರೆ ಅಧಿಕ್ಷಕ ಚಂದ್ರಕಾಂತ ಕದಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







