ಉಡುಪಿ: ಮಾ.8ರಂದು ಸ್ಥಳದಲ್ಲೇ ಪಡಿತರ ಚೀಟಿ ವಿತರಣೆ
ಉಡುಪಿ, ಮಾ.6: ಗ್ರಾಮ ಮಟ್ಟದಲ್ಲಿ ಅರ್ಹರಿಗೆ ಪಡಿತರ ಚೀಟಿಯನ್ನು ಶೀಘ್ರ ಒದಗಿಸಿಕೊಡುವ ಉದ್ದೇಶದಿಂದ ಉಡುಪಿ ಕ್ಷೇತ್ರದ ಗ್ರಾಪಂಗಳಲ್ಲಿ ಎಲ್ಲಾ ಅರ್ಜಿದಾರರಿಗೆ ಸ್ಥಳದಲ್ಲೇ ಪಡಿತರ ಚೀಟಿಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಮಾ.8ರ ಬೆಳಗ್ಗೆ 10:30ಕ್ಕೆ ಕಲ್ಯಾಣಪುರ ಗ್ರಾಪಂ ಸಭಾಭವನದಲ್ಲಿ ಕಲ್ಯಾಣಪುರ, ಕೆಮ್ಮಣ್ಣು, ತೆಂಕನಿಡಿಯೂರು, ಬಡಾನಿಡಿಯೂರು ಗ್ರಾಮಗಳ ಜನರಿಗೆ, ಮಾ.9 ಶುಕ್ರವಾರ ಬೆಳಗ್ಗೆ 10:30ಕ್ಕೆ ಚೇರ್ಕಾಡಿ ಗ್ರಾಪಂ ಸಭಾಭವನ ದಲ್ಲಿ ಉಪ್ಪೂರು, ಆರೂರು, ಚೇರ್ಕಾಡಿ, ಹಾವಂಜೆ, ಕುಕ್ಕೆಹಳ್ಳಿ, ನೀಲಾವರ ಗ್ರಾಮಗಳ ಜನತೆಗೆ, ಮಾ.10 ಶನಿವಾರ ಬೆಳಗ್ಗೆ 10:30ಕ್ಕೆ ಕೊಕ್ಕರ್ಣೆ ಗ್ರಾಪಂ ಸಭಾಭವನದಲ್ಲಿ ಕೊಕ್ಕರ್ಣೆ, ನಾಲ್ಕೂರು, ಹನೇಹಳ್ಳಿ, ಕಾಡೂರು ಗ್ರಾಮಗಳ ಜನರಿಗೆ ಪಡಿತರ ಚೀಟಿ ವಿತರಣೆ ನಡೆಯಲಿದೆ.
ಹೆಚ್ಚಿನ ಅರ್ಜಿದಾರರಿಗೆ ಈಗಾಗಲೇ ಅಂಚೆ ಮೂಲಕ ಪಡಿತರ ಚೀಟಿ ತಲುಪಿಸಲಾಗಿದ್ದು, ಪಡಿತರ ಚೀಟಿ ದೊರೆಯದ ಗ್ರಾಮಸ್ಥರು ಅರ್ಜಿಯ ಸ್ವೀಕೃತಿ ಪತ್ರ, ಆದಾಯ ಪ್ರಮಾಣ ಪತ್ರದ ಪ್ರತಿ, ಪಡಿತರ ಚೀಟಿಗೆ ನಮೂದಿಸಿದ ಕುಟುಂಬ ಸದಸ್ಯರ ಆಧಾರ್ ಪ್ರತಿ ತಂದು ಚೀಟಿ ಪಡೆದುಕೊಳ್ಳಬಹುದು ಎಂದು ಸಚಿವ ಪ್ರಮೋದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





