ಸಿಬಿಐ ತನಿಖೆ ಕೋರಿದ್ದ ಕುಟುಂಬದ ಅರ್ಜಿ ವಜಾ
ಜುನೈದ್ ಖಾನ್ ಹತ್ಯೆ ಪ್ರಕರಣ

ಹೊಸದಿಲ್ಲಿ,ಮಾ.6: ಕ್ಷುಲ್ಲಕ ಕಾರಣಗಳಿಂದ ಅಥವಾ ಕೆಲವೊಮ್ಮೆ ಕಾರಣಗಳೇ ಇಲ್ಲದೆ ಗುಂಪುಗಳಿಂದ ಹತ್ಯೆಗಳು ನಡೆಯುವುದು ಭಾರತದಲ್ಲಿ ಇತ್ತೀಚಿನ ನೂತನ ಬೆಳವಣಿಗೆಯಾಗಿದೆ ಎನ್ನುವುದರಲ್ಲಿ ಯಾವುದೇ ವಿವಾದವಿಲ್ಲ. ಆದರೆ ಇಂತಹ ಪ್ರಕರಣಗಳಲ್ಲಿ ನ್ಯಾಯವು ಮರೀಚಿಕೆಯಾಗುತ್ತಿದೆ ಎನ್ನುವುದು ದೇಶವು ಎದುರಿಸುತ್ತಿರುವ ಇನ್ನೊಂದು ಕಟು ವಾಸ್ತವವಾಗಿದೆ. ಇದಕ್ಕೆ ತಾಜಾ ನಿದರ್ಶನ ಇಲ್ಲಿದೆ. ಹರ್ಯಾಣಾದಲ್ಲಿ ಮತಾಂಧರಿಂದ ಹತ್ಯೆಯಾಗಿದ್ದ ಹದಿಹರೆಯದ ಬಾಲಕ ಜುನೈದ್‌ನ ಕುಟುಂಬವು ಪ್ರಕರಣದಲ್ಲ್ಲಿ ಸಿಬಿಐ ತನಿಖೆ ನಡೆಯಬೇಕೆಂಬ ತನ್ನ ಕೋರಿಕೆಯನ್ನು ತಿರಸ್ಕರಿಸಿದ್ದ ಏಕ ಪೀಠ ನ್ಯಾಯಾಧೀಶರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪಂಜಾಬ್ ಮತ್ತು ಹರ್ಯಾಣಾ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠವು ಮಂಗಳವಾರ ವಜಾಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಲು ಜುನೈದ್ ಕುಟುಂಬಕ್ಕೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.
ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿರುವಂತೆ ಕ್ರಿಮಿನಲ್ ಅಧಿಕಾರ ವ್ಯಾಪ್ತಿಯ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಏಕಪೀಠದ ತೀರ್ಪಿನ ವಿರುದ್ಧ ಮೇಲ್ಮನವಿಯ ವಿಚಾರಣೆಯನ್ನು ವಿಭಾಗೀಯ ಪೀಠವು ನಡೆಸುವಂತಿಲ್ಲ ಎಂದು ಹರ್ಯಾಣಾ ಸರಕಾರವು ವಾದಿಸಿತ್ತು. ಆದರೆ ಫರೀದಾಬಾದ್ ನ್ಯಾಯಾಲಯದಲ್ಲಿ ವಿಚಾರಣೆಯ ಮೇಲಿನ ತಡೆಯಾಜ್ಞೆಯು ಮುಂದುವರಿಯಲಿದೆ.
ಕಳೆದ ವರ್ಷದ ಜೂನ್‌ನಲ್ಲಿ ಜುನೈದ್(15) ಮತ್ತು ಸೋದರರು ಈದ್ ಖರೀದಿಯನ್ನು ಮುಗಿಸಿಕೊಂಡು ರೈಲಿನಲ್ಲಿ ಊರಿಗೆ ಮರಳುತ್ತಿದ್ದಾಗ ಗುಂಪೊಂದು ಸೀಟಿನ ವಿಚಾರದಲ್ಲಿ ಅವರೊಂದಿಗೆ ಜಗಳಕ್ಕಿಳಿದಿತ್ತು. ಕೋಮು ನಿಂದನೆಯನ್ನು ಮಾಡಿದ್ದ ಗುಂಪು ಗೋಮಾಂಸ ಭಕ್ಷಕರೆಂದು ಆರೋಪಿಸಿ ಜುನೈದ್‌ನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿತ್ತು. ‘ಗೋರಕ್ಷಕ’ರ ಹಾವಳಿ ಹೆಚ್ಚಾಗಿ ಅವರ ಅನೈತಿಕ ಪೊಲೀಸ್‌ಗಿರಿಯನ್ನು ನಿಲ್ಲಿಸಲು ಸರಕಾರವು ಯಾವುದೇ ಕ್ರಮ ಕೈಗೊಳ್ಳದೆ ನಿಷ್ಕ್ರಿಯವಾಗಿದ್ದ ಸಂದರ್ಭದಲ್ಲೇ ಜುನೈದ್ ಹತ್ಯೆ ನಡೆದಿತ್ತು.
ನರೇಶ್ ಕುಮಾರ್, ರಮೇಶ್ ಕುಮಾರ್, ರಾಮೇಶ್ವರ ದಾಸ್, ಪ್ರದೀಪ್ ಕುಮಾರ್, ಚಂದ್ರಪ್ರಕಾಶ ಮತ್ತು ಗೌರವ್ ಶರ್ಮಾ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಸಿಬಿಐ ತನಿಖೆ ನಡೆಯಬೇಕೆಂಬ ತನ್ನ ಕೋರಿಕೆಯನ್ನು ತಿರಸ್ಕರಿಸಿದ್ದ ಏಕಪೀಠದ ತೀರ್ಪನ್ನು ಪ್ರಶ್ನಿಸಿ ಜುನೈದ್‌ನ ತಂದೆ ಜಲಾಲುದ್ದೀನ್ ಅವರು ಮೇಲ್ಮನವಿ ಸಲ್ಲಿಸಿದ್ದ ಸಂದರ್ಭ ವಿಭಾಗೀಯ ಪೀಠವು 2017,ಡಿ.5ರಂದು ಫರೀದಾಬಾದ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ವಾಸ್ತವದಲ್ಲಿ ಹರ್ಯಾಣಾದ ಹೆಚ್ಚುವರಿ ಅಡ್ವೋಕೇಟ್ ಜನರಲ್ ನವೀನ್ ಕೌಶಿಕ್‌ರನ್ನು ಪ್ರಕರಣದಲ್ಲಿಯ ಮುಖ್ಯ ಆರೋಪಿಯ ವಕೀಲರೊಂದಿಗೆ ತಾನು ನೋಡಿದ್ದಾಗಿ ಹೇಳಿದ್ದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರು, ವೃತ್ತಿಪರ ದುರ್ನಡತೆಗಾಗಿ ಅವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಇದರಿಂದಾಗಿ ಸರಕಾರಿ ವಕೀಲರ ಸಮಿತಿಗೆ ಕೌಶಿಕ್ ರಾಜೀನಾಮೆ ನೀಡುವಂತಾಗಿತ್ತು.







