ವೀಳ್ಯದೆಲೆ ಮಾರುವ 245 ಕುಟುಂಬಗಳಿಗೆ ತಲಾ 5 ಗುಂಟೆ ಜಮೀನು: ಸಚಿವ ಮಹದೇವಪ್ಪ

ಮೈಸೂರು,ಮಾ.6: ಮೈಸೂರು ನಗರದಲ್ಲಿ ದಲಿತರೇ ಹೆಚ್ಚು ವಾಸಮಾಡುವ ಅಶೋಕಪುರಂ ನಲ್ಲಿ ವೀಳ್ಯದೆಲೆ ಮಾರಿಕೊಂಡು ಜೀವನ ನಡೆಸುತ್ತಿರುವ 245 ಕುಟುಂಬಗಳಿಗೆ ತಲಾ 5 ಗುಂಟೆ ಜಮೀನು ಮಂಜೂರಾಗಿದ್ದು, ಇದರ ಹಕ್ಕುಪತ್ರವನ್ನು ಮಾ.10 ರಂದು ಮುಖ್ಯಮಂತ್ರಿಗಳು ವಿತರಣೆ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ನಗರದ ಅಶೋಕಪುರಂ ನಲ್ಲಿರುವ ಅರಣ್ಯಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರಿನ ಅಶೋಕಪುರಂನಲ್ಲಿ ತಲತಲಾಂತರಗಳಿಂದ 245 ಕುಟುಂಬಗಳು ವೀಳ್ಯದೆಲೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರಿಗೆ 1977ರಲ್ಲಿ ಅಂದಿನ ಸಚಿವರಾಗಿದ್ದ ದಿವಂಗತ ಬಿ.ಬಸವಲಿಂಗಪ್ಪ ಅವರು, ಜಮೀನು ನೀಡುವಂತೆ ಆದೇಶ ಮಾಡಿದ್ದರು. ಆದರೆ, ಅಂದಿನಿಂದ ಇಂದಿನವರೆಗೂ ಇವರಿಗೆ ಇದರ ಖಾತೆಯಾಗಲಿ ಹಕ್ಕುಪತ್ರವಾಗಲಿ ದೊರೆತಿರಲಿಲ್ಲ. ಇವರ ಬಹು ವರ್ಷಗಳ ಹೋರಾಟವನ್ನು ಮನಗಂಡ ನಾನು, ಶಾಸಕರು, ನಗರಪಾಲಿಕೆ ಸದಸ್ಯರು, ಸ್ಥಳೀಯ ಮುಖಂಡರ ಜೊತೆ ಚರ್ಚಿಸಿ ಸಚಿವ ಸಂಪುಟ ಮುಂದೆ ಇಟ್ಟು ಒಪ್ಪಿಗೆ ಪಡೆದು, ಮುಖ್ಯಮಂತ್ರಿ ಸಿದ್ಧರಾಮಯ್ಯರವರು ಇವರ ಆರ್ಥಿಕ, ಸ್ವಾವಲಂಭನೆಯ ದೃಷ್ಟಿಯಿಂದ ನಗರದ ಸೋಯೇಜ್ ಫಾರಂ ಬಳಿ ತಲಾ 5 ಗುಂಟೆ ಜಮೀನನ್ನು ನೀಡಿ ಹಕ್ಕು ಪತ್ರ ನೀಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಸುಮಾರು 25 ಸಾವಿರ ಮಂದಿ ಈ ಅಶೋಕಪುರಂ ನಲ್ಲಿ ವಾಸಮಾಡತೊಡಗಿದ್ದಾರೆ. ಸುಮಾರು 4,5 ದಶಕಗಳಿಂದ ಅಭಿವೃದ್ಧಿಯನ್ನೇ ಕಂಡಿಲ್ಲ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ತಿಳಿಸಿದಾಗ, ಈ ಬಡಾವಣೆಯ ಸಂಪೂರ್ಣ ಅಭಿವೃದ್ಧಿಗೆ 22 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು.
ಇಲ್ಲಿ ವಾಸಮಾಡುವ ಜನರು ಸ್ವಾಭಿಮಾನಿಗಳು, ಅಂಬೆಡ್ಕರ್ ಅವರ ಸಂವಿಧಾನದಲ್ಲಿ ನಂಬಿಕೆ ಇಟ್ಟು, ಸೈದ್ಧಾಂತಿಕ ನಿಲುವುಗಳ ಮೂಲಕ ಬದುಕು ನಡೆಸುತ್ತಿರುವವರು. ಇವರ ಅಭಿವೃದ್ಧಿ ದೃಷ್ಟಿಯಿಂದ ಸಂವಿಧಾನ ಪ್ರಜಾಪ್ರಭುತ್ವಗಳ ಬಲವರ್ದನೆಗೆ ಶಕ್ತಿ ನೀಡಿದಂತಾಗತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಾಗಾಗಿ, ಇಲ್ಲಿನ ರಸ್ತೆಗಳು, ಚರಂಡಿಗಳ ನಿರ್ಮಾಣಕ್ಕೆ 22ಕೋಟಿ ರೂ.ಗಳನ್ನು ನೀಡಲಾಗಿದೆ. ಅದರಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಪ್ರಮುಖ ಐದು ರಸ್ತೆ ಮತ್ತು ಕ್ರೀಡಾಂಗಣ ಅಭಿವೃದ್ಧಿಗೆ 10ಕೋಟಿ ನೀಡಲಾಗಿದೆ. ಇನ್ನು 12 ಕೋಟಿ ರೂ.ಗಳಲ್ಲಿ ಈ ಬಡಾವಣೆಯ ಎಲ್ಲಾ ರಸ್ತೆ ಮತ್ತು ಚರಂಡಿಗಳನ್ನು ಮಾಡಲಾಗುವುದು ಎಂದು ತಿಳಿಸಿದರು. ಇನ್ನು ಅಶೋಕಪುರಂ ಸಮುದಾಯ ಭವನವನ್ನು ಮೇಲ್ದರ್ಜೆಗೇರಿಸಲು ಇಲ್ಲಿನ ನಿವಾಸಿಗಳು ಮನವಿಯನ್ನು ಸಲ್ಲಿಸಿದ್ದಾರೆ. ಇದಕ್ಕೆ ಸುಮಾರು 10ಕೋಟಿ ರೂ.ಗಳ ಅಂದಾಜು ಪಟ್ಟಿ ಮಾಡಲಾಗಿದೆ. ಇದನ್ನು ಆದಷ್ಟು ಶೀಘ್ರದಲ್ಲಿ ಮಾಡುವುದಾಗಿ ಸಚಿವ ಮಹದೇವಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ನಗರಪಾಲಿಕೆ ಸದಸ್ಯ ಪುರುಷೋತ್ತಮ್, ವಸ್ತುಪ್ರದರ್ಶನಿ ಪ್ರಾಧಿಕಾರದ ಅಧ್ಯಕ್ಷ ಬಿ.ಸಿದ್ಧರಾಜು, ಮುಡಾ ಸದಸ್ಯ ಸೋಮಶೇಖರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಾನು ಎಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವುದು ಮುಖ್ಯ ಅಲ್ಲ: ಸಚಿವ ಮಹದೇವಪ್ಪ
ನಾನು ಎಲ್ಲಿ ಚುನಾವಣೆಗೆ ಎಲ್ಲಿ ಸ್ಪರ್ಧೆ ಮಾಡುತ್ತೇನೆ ಎನ್ನುವುದು ಮುಖ್ಯ ಅಲ್ಲ, ಕೋಮುವಾದಿಗಳು ಹಾಗೂ ಮೂಲಭೂತವಾದಿಗಳನ್ನು ಮಟ್ಟಹಾಕಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂಬುದೇ ನನ್ನ ಉದ್ದೇಶ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಮುವಾದಿಗಳು ಹಾಗೂ ಮೂಲಭೂತವಾದಿಗಳನ್ನು ಮಟ್ಟಹಾಕಬೇಕು ಎಂಬುವುದೇ ನನ್ನ ಗುರಿ, ಹಾಗಾಗಿ ನಾನು ಸ್ಪರ್ಧೆ ಮಾಡುವುದಕ್ಕಿಂತ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಬಲಪಡಿಸಿ, ಅಧಿಕಾರಕ್ಕೆ ತರಬೇಕು ಎಂದುಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇದೊಂದು ಭ್ರಷ್ಟ ಸರಕಾರ ಎಂದು ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮದು ಭ್ರಷ್ಟ ಸರಕಾರ ಆಗಿದ್ದರೆ ದಾಖಲೆ ಸಹಿತ ಸಾಬೀತು ಪಡಿಸಲಿ. ನಿನ್ನೆ ಮುಖ್ಯಮಂತ್ರಿಗಳು ಸಹ ಅದನ್ನೇ ಹೇಳಿದ್ದಾರೆ. ಆದರೆ ಇವರಿಗೆ ನಮ್ಮ ಅಭಿವೃದ್ಧಿಯನ್ನು ಸಹಿಸಲು ಆಗುತ್ತಿಲ್ಲ. ಹಾಗಾಗಿ ಹತಾಶೆಯಿಂದ ಇಂತಹ ಮಾತುಗಳನ್ನು ಆಡುತ್ತಿದ್ದಾರೆ. ರಾಜ್ಯದ ಯಾವುದೇ ಭಾಗಕ್ಕೆ ಹೋದರೂ ರಸ್ತೆಗಳು, ಕೆರೆ ಕಟ್ಟೆಗಳು, ಪ್ರಮುಖ ವಾಣಿಜ್ಯ ಕೇಂದ್ರಗಳು ಸಾಕಷ್ಟು ಅಭಿವೃದ್ಧಿ ಕಂಡಿವೆ ಎಂದು ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು.
ಇನ್ನೂ ಅಶೋಕ್ ಖೇಣಿ ಪಕ್ಷ ಸೇರ್ಪಡೆ ಕುರಿತ ಆರೋಪಕ್ಕೆ ಪ್ರತಿಕ್ರಿಯಿಸಿ, ತಪ್ಪುಗಳಿದ್ದರೆ ಕಾನೂನು ಇದೆ. ಯಾರು ಬೇಕಾದರೂ ಹೋಗಬಹುದು. ನಮ್ಮ ಸರಕಾರದ ಮೇಲೆ ಬಿಜೆಪಿಯವರು ಮಾಡುವ ಆರೋಪಗಳು ಆಧಾರ ರಹಿತವಾದುವು ಎಂದು ಹೇಳಿದರು.







