ಅಪಘಾತಕ್ಕೀಡಾದವರಿಗೆ ಸಹಾಯ ಮಾಡುವವರ ಸಂಖ್ಯೆ ಹೆಚ್ಚಾಗಲಿ: ಡಾ.ಅನಿಕೇತ್
ಬೆಂಗಳೂರು, ಮಾ.6: ಅಪಘಾತಕ್ಕೀಡಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸುವ ವ್ಯಕ್ತಿಗೆ ಪೊಲೀಸ್ ಹಾಗೂ ನ್ಯಾಯಾಲಯದಲ್ಲಿ ಯಾವುದೆ ರೀತಿಯ ಕಿರುಕುಳ ಇರುವುದಿಲ್ಲ ಎಂಬುದರ ಕುರಿತು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ ಎಂದು ಭಾರತಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ(ಎಐಐಎಂಎಸ್) ವೈದ್ಯ ಡಾ.ಅನಿಕೇತ್ ತಿಳಿಸಿದರು.
ಮಂಗಳವಾರ ನಗರದ ಕುಷ್ಟರೋಗ ಆಸ್ಪತ್ರೆಯ ಆವರಣದಲ್ಲಿ ‘ಫಸ್ಟ್ ರೆಸ್ಪಂಡ್ ಗೈಡ್’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವಾಹನ ಸಂಖ್ಯೆ ಹೆಚ್ಚುತ್ತಿರುವ ಪ್ರಮಾಣದಲ್ಲೆ ಅಪಘಾತಗಳ ಸಂಖ್ಯೆಯು ವಿಪರೀತವಾಗಿದೆ. ಹೀಗಾಗಿ ಅಪಘಾತಕ್ಕೀಡಾಗಿ ಸಾವು, ಬದುಕಿನ ಸ್ಥಿತಿಯಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದುಪ್ರತಿಯೊಬ್ಬ ನಾಗರಿಕರ ಕರ್ತವ್ಯವೆಂದು ತಿಳಿಸಿದರು.
ಅಪಘಾತಕ್ಕೀಡಾದ ವ್ಯಕ್ತಿಯ ಸಹಾಯಕ್ಕೆ ಯಾರೂ ಹೋಗದ ಹಲವು ಪ್ರಕರಣಗಳನ್ನು ನಾವು ನೋಡಿದ್ದೇವೆ. ಒಂದು ವೇಳೆ ಅಪಘಾತಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿದರೆ ಪೊಲೀಸರು ಹಾಗೂ ನ್ಯಾಯಾಲಯದಿಂದ ಅನಗತ್ಯ ಕಿರುಕುಳಕ್ಕೆ ಈಡಾಗಬೇಕಾಗುತ್ತದೆ ಎಂದು ಭಾವಿಸಿ ಸಹಾಯಕ್ಕೆ ಮುಂದಾಗುತ್ತಿಲ್ಲ. ಆದರೆ, ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಸಹಾಯ ಮಾಡಿದರೆ, ಅಂತಹ ವ್ಯಕ್ತಿಗೆ ಪೊಲೀಸ್‌ರಿಂದ ಯಾವುದೆ ರೀತಿಯ ಪ್ರಶ್ನೆ, ನ್ಯಾಯಾಲಯಕ್ಕೆ ಅಲೆದಾಟ ಸೇರಿದಂತೆ ಯಾವುದೆ ರೀತಿಯ ಕಿರುಕುಳ ನೀಡಬಾರದೆಂದು ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಅಗತ್ಯವಿದೆ ಎಂದು ಅವರು ಆಶಿಸಿದರು.
ಅಪಘಾತಕ್ಕೀಡಾದವರಿಗೆ ಸಹಾಯ ಮಾಡುವಲ್ಲಿ ಸಂಚಾರಿ ಪೊಲೀಸರ ಜವಾಬ್ದಾರಿ ಹೆಚ್ಚಿದೆ. ಇವರು ರಸ್ತೆ ಮಧ್ಯೆದಲ್ಲಿಯೆ ಕೆಲಸ ಮಾಡುವುದರಿಂದ ಅಪಘಾತಗಳ ಕುರಿತು ಇವರಿಗೆ ಶೀಘ್ರವಾಗಿ ಮಾಹಿತಿ ಸಿಗಲಿದೆ. ಹೀಗಾಗಿ ಅವರು ಮೊದಲು ಧಾವಿಸಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸುವಂತಹ ಕೆಲಸ ಮಾಡಬೇಕು. ಆ ಮೂಲಕ ಸಾರ್ವಜನಿಕರಲ್ಲಿಯೂ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತರಬೇತಿ ಕೇಂದ್ರದ ಡಾ.ಪ್ರಮೀಳಾ ಇನ್ನಿತರ ವೈದ್ಯರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ನಗರದ ವಿವಿಧ ಸಂಚಾರ ಠಾಣೆ ವಿಭಾಗದ ಪೊಲೀಸರು ಉಪಸ್ಥಿತರಿದ್ದರು.







