ರಶ್ಯದ ಮಾಜಿ ಬೇಹುಗಾರನಿಗೆ ವಿಷಪ್ರಾಶನ?

ಲಂಡನ್, ಮಾ. 6: ರಶ್ಯದ ಮಾಜಿ ಬೇಹುಗಾರ ಸರ್ಗಿ ಸ್ಕ್ರಿಪಲ್ ಮೇಲೆ ಸೋಮವಾರ ಬ್ರಿಟನ್‌ನಲ್ಲಿ ವಿಷಪ್ರಾಶನ ನಡೆದಿದ್ದು ಸಂಪರ್ಕಕ್ಕೆ ಬಂದ ಬಳಿಕ ಗಂಭೀರವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಈ ಪ್ರಕರಣದ ತನಿಖೆಯಲ್ಲಿ ಒಳಗೊಂಡಿರುವ ಎರಡು ಮೂಲಗಳು ಹೇಳಿವೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ.
ಬ್ರಿಟನ್‌ನ ದಕ್ಷಿಣದ ನಗರ ಸ್ಯಾಲಿಸ್‌ಬರಿಯಲ್ಲಿರುವ ವಾಣಿಜ್ಯ ಮಳಿಗೆಯೊಂದರ ಬೆಂಚ್‌ನಲ್ಲಿ ರವಿವಾರ ಇಬ್ಬರು ವ್ಯಕ್ತಿಗಳು- 66 ವರ್ಷದ ಓರ್ವ ಪುರುಷ ಮತ್ತು 33 ವರ್ಷದ ಓರ್ವ ಮಹಿಳೆ)- ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಬ್ರಿಟಿಶ್ ಪೊಲೀಸರು ಹೇಳಿದ್ದಾರೆ.
ಅವರಿಬ್ಬರ ಪರಿಸ್ಥಿತಿಯೂ ಗಂಭೀರವಾಗಿದ್ದು, ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿದ್ದಾರೆ.
ರಶ್ಯದ ಜಿಆರ್‌ಯು ಸೇನಾ ಗುಪ್ತಚರ ಸೇವೆಯಲ್ಲಿ ಕರ್ನಲ್ ಆಗಿದ್ದ ಸ್ಕ್ರಿಪಲ್‌ಗೆ 2006ರಲ್ಲಿ ದೇಶದ್ರೋಹ ಆರೋಪದ ಪ್ರಕರಣದಲ್ಲಿ 13 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬ್ರಿಟನ್ ಮೇಲೆ ಬೇಹುಗಾರಿಕೆ ನಡೆಸಲು ನಿಯೋಜಿಸಲಾದ ಹತ್ತಾರು ರಶ್ಯ ಬೇಹುಗಾರರಿಗೆ ದ್ರೋಹ ಮಾಡಿದ ಆರೋಪವನ್ನು ಅವರ ಮೇಲೆ ಹೊರಿಸಲಾಗಿತ್ತು.
ಆದರೆ, ಶೀತಲ ಸಮರ ಕಾಲದ ಬೇಹುಗಾರ ವಿನಿಮಯ ಕಾರ್ಯಕ್ರಮದನ್ವಯ 2010ರಲ್ಲಿ ವಿಯೆನ್ನಾ ವಿಮಾನ ನಿಲ್ದಾಣದಲ್ಲಿ ಅವರನ್ನು ವಿನಿಮಯ ಮಾಡಲಾಗಿತ್ತು.
ಸ್ಕ್ರಿಪಲ್‌ಗೆ 66 ವರ್ಷ ವಯಸ್ಸು. ಚಿಕಿತ್ಸೆ ಪಡೆಯುತ್ತಿರುವವರ ಹೆಸರನ್ನು ಬ್ರಿಟಿಶ್ ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ, ಗಂಭೀರವಾಗಿ ಗಾಯಗೊಂಡಿರುವ ಪುರುಷ ಸ್ಕ್ರಿಪಲ್ ಎಂಬುದಾಗಿ ಮೂಲಗಳು ಖಚಿತಪಡಿಸಿವೆ. ಆದರೆ, ಅವರು ಅಸ್ವಸ್ಥತೆಗೆ ಒಳಗಾಗುವಂತೆ ಮಾಡಿದ ಪದಾರ್ಥ ಯಾವುದು ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ಹೇಳಿವೆ.
ಮಾಜಿ ಕೆಜಿಬಿ ಏಜಂಟ್ ಮಾದರಿಯಲ್ಲೇ ದಾಳಿ
ರಶ್ಯದ ಬೇಹುಗಾರಿಕೆ ಸಂಸ್ಥೆ ಕೆಜಿಬಿಯ ಮಾಜಿ ಏಜಂಟ್ ಅಲೆಕ್ಸಾಂಡರ್ ಲಿಟ್ವಿನೆಂಕೊ ಅವರನ್ನು 2006ರಲ್ಲಿ ಲಂಡನ್‌ನಲ್ಲಿ ‘ಪೊಲೋನಿಯಂ-210’ ಎಂಬ ವಿಕಿರಣಶೀಲ ಪದಾರ್ಥ ಪ್ರಯೋಗಿಸಿ ಹತ್ಯೆ ಮಾಡಿರುವುದನ್ನು ಸ್ಮರಿಸಬಹುದಾಗಿದೆ.
ಆ ಹತ್ಯೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಂಗೀಕಾರ ನೀಡಿರುವ ಸಾಧ್ಯತೆಯಿದೆ ಎಂಬ ನಿರ್ಧಾರಕ್ಕೆ ತನಿಖಾ ಆಯೋಗವೊಂದು ಬಂದಿತ್ತು. ಆ ಬಳಿಕ, ರಶ್ಯ ಮತ್ತು ಟ್ರಿಟನ್‌ಗಳ ಸಂಬಂಧ ಹಳಸಿದೆ.







