ನೆರವು ಸ್ಥಗಿತದ ಬಳಿಕವೂ ಪಾಕಿಸ್ತಾನದ ವರ್ತನೆಯಲ್ಲಿ ಬದಲಾವಣೆಯಾಗಿಲ್ಲ: ಅಮೆರಿಕ

ವಾಶಿಂಗ್ಟನ್, ಮಾ. 6: ಪಾಕಿಸ್ತಾನಕ್ಕೆ ನೀಡಬೇಕಾಗಿರುವ ಸುಮಾರು 2 ಬಿಲಿಯ ಡಾಲರ್ (ಸುಮಾರು 13,000 ಕೋಟಿ ರೂಪಾಯಿ) ನೆರವನ್ನು ಅಮೆರಿಕ ಸರಕಾರವು ಸುಮಾರು 2 ತಿಂಗಳ ಹಿಂದೆ ಸ್ಥಗಿತಗೊಳಿಸಿದ ಬಳಿಕವೂ ಆ ದೇಶದ ವರ್ತನೆಯಲ್ಲಿ ‘ಗಮನಾರ್ಹ’ ಬದಲಾವಣೆಯೇನೂ ಆಗಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ ಹೇಳಿದ್ದಾರೆ.
‘‘ಪಾಕಿಸ್ತಾನದ ವರ್ತನೆಯಲ್ಲಿ ನಾವಿನ್ನೂ ನಿರ್ಣಾಯಕ ಹಾಗೂ ಗಮನಾರ್ಹ ಬದಲಾವಣೆಯನ್ನೇನೂ ನೋಡಿಲ್ಲ. ಆದಾಗ್ಯೂ, ತಾಲಿಬಾನ್‌ನ ಪ್ರಭಾವವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಾವು ವಹಿಸಬಹುದಾದ ಪಾತ್ರದ ಬಗ್ಗೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುವುದನ್ನು ಮುಂದುವರಿಸಿದ್ದೇವೆ’’ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಪ್ರಿನ್ಸಿಪಾಲ್ ಡೆಪ್ಯುಟಿ ಅಸಿಸ್ಟಾಂಟ್ ಸೆಕ್ರೆಟರಿ ಆಫ್ ಸ್ಟೇಟ್ ಆಲಿಸ್ ವೆಲ್ಸ್ ಹೇಳಿದರು.
ಅಪ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆದ ಕಾಬೂಲ್ ಸಮ್ಮೇಳನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೆಲ್ಸ್, ಅಫ್ಘಾನ್ ಶಾಂತಿ ಪ್ರಕ್ರಿಯೆಯಲ್ಲಿ ಪಾಕಿಸ್ತಾನಕ್ಕೆ ಮಹತ್ವದ ಪಾತ್ರವಿದೆ ಎಂದರು.





