ಜಲಪಾತಕ್ಕೆ ಜಾರಿ ಬಿದ್ದು ಮುಕ್ಕ ನಿವಾಸಿ ಬೆಂಗಳೂರಿನಲ್ಲಿ ಮೃತ್ಯು

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ. 6: ಬೆಂಗಳೂರಿನಲ್ಲಿ ಜಲಪಾತಕ್ಕೆ ತೆರಳಿದ್ದ ಐದು ಮಂದಿಯ ತಂಡದ ಸದಸ್ಯರೊಬ್ಬರನ್ನು ರಕ್ಷಿಸುವ ಸಲುವಾಗಿ ನೀರಿಗೆ ಧುಮುಕಿದ ಮುಕ್ಕದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
ಮುಕ್ಕದ ನಿವಾಸಿ ಝಾಕಿರ್ ಹುಸೈನ್ ಎಂಬವರ ಪುತ್ರ ಶಾಹಿಲ್ ಹುಸೈನ್ (21) ಮೃತ ಯುವಕ ಎಂದು ಗುರುತಿಸಲಾಗಿದೆ.
ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಬಿಬಿಎಂನ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದರು. ಐದು ಮಂದಿಯ ತಂಡವೊಂದು ಸೋಮವಾರ ಬೆಂಗಳೂರಿನಲ್ಲಿ ಜಲಪಾತದ ಕಡೆಗೆ ಬಂದಿದ್ದರೆಂದು ಹೇಳಲಾಗಿದೆ. ಈ ಸಂದರ್ಭ ತಂಡದಲ್ಲಿದ್ದ ಓರ್ವ ಯುವಕ ನೀರಿಗೆ ಬಿದ್ದಿರುವುದನ್ನು ನೋಡಿ ಅವರನ್ನು ರಕ್ಷಿಸಲು ಶಾಹಿಲ್ ಹುಸೈನ್ ನೀರಿಗೆ ಧುಮುಕಿದ್ದು, ಪರಿಣಾಮವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಶಾಹಿಲ್ ಅವರ ಮೃತದೇಹವನ್ನು ಮಂಗಳವಾರ ಮುಕ್ಕದ ಅವರ ಮನೆಗೆ ತಂದಿದ್ದು, ರಾತ್ರಿಯ ನಮಾಝ್ ಬಳಿಕ ಮುಕ್ಕದ ಮಸೀದಿಯಲ್ಲಿ ಮಯ್ಯಿತ್ ನಮಾಝ್ ನೆರವೇರಿದೆ. ಝಾಕಿರ್ ಹುಸೈನ್ ಅವರಿಗೆ 5 ಮಂದಿ ಮಕ್ಕಳು. ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರ. ಕೊನೆಯವರೇ ಶಾಹಿಲ್.
ಝಾಕಿರ್ ಅವರು ಮಸ್ಕತ್ ನಲ್ಲಿ ಉದ್ಯೋಗದಲ್ಲಿದ್ದು, ವಿಷಯ ತಿಳಿದು ಸೋಮವಾರ ಊರಿಗೆ ಮರಳಿದ್ದಾರೆ. ಶಾಹಿಲ್ ಕಾಟಿಪಳ್ಳ ಕಾರ್ಪೊರೇಟರ್ ಬಶೀರ್ ಅವರ ಮೊಮ್ಮಗ.





