ದಾವಣಗೆರೆ: ರಸ್ತೆ ತಡೆ ನಡೆಸಿದ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರ ಬಂಧನ

ದಾವಣಗೆರೆ,ಮಾ.6: ಬಗರ್ ಹುಕುಂ ಸಾಗುವಳಿದಾರರಿಗೆ ಅನ್ಯಾಯ ಮಾಡಿದ ತಹಶೀಲ್ದಾರ್ ವರ್ತನೆ ಖಂಡಿಸಿ, ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದನ್ನು ರದ್ದುಪಡಿಸುವಂತೆ ಒತ್ತಾಯಿಸಿ ಕಪ್ಪು ಬಾವುಟದ ಸಮೇತ ಇಲ್ಲಿನ ಡಿಸಿ ಕಚೇರಿ ಬಳಿ ಹಳೇ ಪಿ.ಬಿ. ರಸ್ತೆ ತಡೆ ನಡೆಸಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಅಧಿಕಾರಿಗಳಿಂದಾದ ಅನ್ಯಾಯ ಖಂಡಿಸಿ, ಕಲ್ಲು ಗಣಿಗಾರಿಕೆ ನೀಡಿದ ಅನುಮತಿ ರದ್ಧುಪಡಿಸುವಂತೆ ಒತ್ತಾಯಿಸಿ ಹಳೆ ಪಿ.ಬಿ. ರಸ್ತೆ ತಡೆ ನಡೆಸಿ ಪ್ರತಿಭಟಿಸುತ್ತಿದ್ದ ಮುಖಂಡರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಕರೆದೊಯ್ದರು.
ಈ ಸಂದರ್ಭ ಮಾತನಾಡಿದ ಡಿಎಸ್ಸೆಸ್ ರಾಜ್ಯ ಸಂಚಾಲಕ ಎಚ್. ಮಲ್ಲೇಶ್, ಉಚ್ಚಂಗಿದುರ್ಗದ ಸರ್ಕಾರಿ ಜಾಗದಲ್ಲಿ ದುಗ್ಗತ್ತಿ ಉಚ್ಚೆಂಗೆಪ್ಪಗೆ ಸಾಗುವಳಿ ಮಾಡಲು ಅವಕಾಶ ನೀಡಿ, ಸಕ್ರಮಗೊಳಿಸಬೇಕು. ಕೃಷಿ ಸಾಗುವಳಿ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆಗೆ ಗುತ್ತಿಗೆ ಅನುಮತಿ ನೀಡಿದ್ದನ್ನು ರದ್ಧುಪಡಿಸಬೇಕು. ಆದಿ ಕರ್ನಾಟಕ ಜಾತಿಗೆ ಸೇರಿದ ದುಗ್ಗತ್ತಿ ಉಚ್ಚೆಂಗೆಪ್ಪಗೆ ಹರಪನಹಳ್ಳಿ ತಹಸೀಲ್ದಾರರಿಂದ ಅನ್ಯಾಯವಾಗಿದೆ. ಉಚ್ಚಂಗಿದುರ್ಗದ ಸ.ನಂ. 441/ಎ2ರಲ್ಲಿ 19.42 ಎಕರೆ ಸರ್ಕಾರಿ ಭೂಮಿಯಲ್ಲಿ ಅನಾದಿ ಕಾಲದಿಂದಲೂ ಭೂಮಿ ಸಾಗುವಳಿ ಮಾಡಿಕೊಂಡು ಬರಲಾಗುತ್ತಿದೆ. 23.12.1998ರಲ್ಲೇ ಬಗರ್‍ಹುಕುಂ ಸಾಗುವಳಿ ಸಕ್ರಮೀಕರಣಕ್ಕೆ ನಂ. 53ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸಾಗುವಳಿಗೆ ಹೊಂದಿಕೊಂಡ ಪ್ರದೇಶದಲ್ಲಿ ಸಿಡಿದ ಕಲ್ಲುಬಂಡೆ ಸ್ಪೋಟಕ ಸಿಡಿ ಮದ್ದು ಪ್ರಕರಣದಲ್ಲಿ ಉಳುಮೆದಾರ ಮತ್ತು ಕೋರೆ ಮಾಲೀಕ ಎಂಬುದಾಗಿ ದಾವಣಗೆರೆ ಸೆಷನ್ ನ್ಯಾಯಾಲಯ ಸೆರೆವಾಸ ಮತ್ತು ದಂಡ ವಿಧಿಸಿತ್ತು ಎಂದರು.
ಉಳುಮೆದಾರನಾದ ದುಗ್ಗತ್ತಿ ಉಚ್ಚೆಂಗೆಪ್ಪನು ಹೈಕೋರ್ಟ್‍ನಲ್ಲಿ ಅಪೀಲು ಸಲ್ಲಿಸಿ, ಬಿಡುಗಡೆಗೊಂಡ ನಂತರ 23.9.2002ರಂದು ಬಗರ್ ಹುಕುಂ ಸಮಿತಿ ವಜಾಗೊಳಿಸಿದ ಅರ್ಜಿಯನ್ನು ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿ, ನ್ಯಾಯಾಲಯದಲ್ಲಿ ವಿಚಾರಣೆ ಮೇಲ್ಮನವಿ ಪುರಸ್ಕರಿಸಿ, ನಿಯಮಾನುಸಾರ ನಿರ್ಣಯ ಕೈಗೊಳ್ಳಲು ಆದೇಶ ನೀಡಿದೆ. ಜೀವನಾದಾರಿತ ಭೂ ಸಾಗುವಳಿ ವಂಚಿತ ದುಗ್ಗತ್ತಿ ಉಚ್ಚಂಗೆಪ್ಪಗೆ ನ್ಯಾಯ ದೊರಕಿಸಿಕೊಡಲಿ ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಮುಖಂಡರಾದ ಮುಖಂಡರಾದ ಡಿ. ಹನುಮಂತಪ್ಪ, ಬುಳಸಾಗರ ಸಿದ್ದರಾಮಯ್ಯ, ಎಚ್.ಸಿ. ಮಲ್ಲಪ್ಪ, ದುಗ್ಗಮ್ಮ ಉಚ್ಚೆಂಗೆಪ್ಪ, ಮಂಜಮ್ಮ, ಬಸವರಾಜಪ್ಪ, ನೀಲಗುಂದ ಅಂಜಿನಪ್ಪ, ಕೆ. ಚಂದ್ರಕಾಂತ ಇದ್ದರು.







