ಪುತ್ತೂರು: ನೊಂದ ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಬ್ಯಾನರ್
ರಸ್ತೆ ದುರಸ್ತಿ ಮಾಡದಿದಲ್ಲಿ ‘ನೋಟಾ ಮತ’

ಪುತ್ತೂರು, ಮಾ. 6: ‘ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾವು ನೋಟಾ ಮತವನ್ನು ಚಲಾಯಿಸಲಿದ್ದೇವೆ ಇಲ್ಲವೇ ಚುನಾವಣಾ ಬಹಿಷ್ಕಾರ ಮಾಡಲಿದ್ದೇವೆ’ ಎಂದು ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಸಾಜ ಎಂಬಲ್ಲಿನ ಗ್ರಾಮಸ್ಥರು ಬ್ಯಾನರ್ ಅಳವಡಿಸಿ ಜನಪ್ರತಿನಿಧಿಗಳನ್ನು ಹಾಗೂ ರಾಜಕೀಯ ಪಕ್ಷಗಳನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.
ಇಲ್ಲಿನ ಬೆಳೆಯೂರುಕಟ್ಟೆಯ ಸಾಜ ಕ್ರಾಸ್‌ನಲ್ಲಿ ಬ್ಯಾನರ್ ಅಳವಡಿಸಲಾಗಿದ್ದು, ‘ರಾಜಕೀಯ ಪಕ್ಷದವರಿಗೆ ಎಚ್ಚರಿಕೆ ಬೆಳಿಯೂರುಕಟ್ಟೆ-ಸಾಜ ರಸ್ತೆಯ ಸಾಜ ಕ್ರಾಸ್‌ನಿಂದ ಪನೆತ್ತಡ್ಕದವರೆಗಿನ ಒಂದು ಕಿಲೋ ಮೀಟರ್ ರಸ್ತೆಯನ್ನು ಮುಂದಿನ ವಿಧಾನಸಭಾ ಚುನಾವಣೆಯ ಮೊದಲು ಪೂರ್ಣ ಡಾಮರೀಕರಣ ಮಾಡದೇ ಇದ್ದಲ್ಲಿ ಯಾವ ಪಕ್ಷದ ಅಭ್ಯರ್ಥಿಯು ಕೂಡ ಸಾಜ ಭಾಗದ ಮನೆಗಳಿಗೆ ಮತ ಕೇಳಲು ಬರಬೇಡಿ. ಈ ಬಗ್ಗೆ ನಿರ್ಲಕ್ಷ್ಯತನ ಮಾಡಿ ಡಾಮರೀಕರಣ ಮಾಡದೇ ಇದ್ದಲ್ಲಿ ಆ ಭಾಗದ ಎಲ್ಲ ಮತದಾರರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೋಟಾ ಮತವನ್ನು ಚಲಾಯಿಸಲಿದ್ದೇವೆ ಇಲ್ಲವೇ ಚುನಾವಣಾ ಬಹಿಷ್ಕಾರ ಮಾಡಲಿದ್ದೇವೆ ನೊಂದ ಗ್ರಾಮಸ್ಥರು’ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.





