ಪೆರಿಯಾರ್ ಪ್ರತಿಮೆ ಉರುಳಿಸುವ ಪೋಸ್ಟ್: ಅಡ್ಮಿನ್ ನನ್ನು ದೂರಿದ ಬಿಜೆಪಿ ನಾಯಕ ರಾಜಾ

ಹೊಸದಿಲ್ಲಿ, ಮಾ.7: ತಮಿಳುನಾಡಿನ ಸಾರ್ವಜನಿಕ ಪ್ರದೇಶದಲ್ಲಿದ್ದ ಪ್ರತಿಷ್ಠಾಪಿಸಲಾಗಿದ್ದ ದ್ರಾವಿಡ ಚಳವಳಿ ನಾಯಕ ಪೆರಿಯಾರ್ ಅವರ ಪ್ರತಿಮೆಯನ್ನು ಕೆಡವಲಾಗುವುದು ಎಂದು ಪ್ರತಿಪಾದಿಸಿದ ಫೇಸ್‌ಬುಕ್ ಪೋಸ್ಟ್ ಕುರಿತಂತೆ ಬಿಜೆಪಿ ಹೈಕಮಾಂಡ್ ತನ್ನ ನಾಯಕ ಎಚ್. ರಾಜಾ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಈ ಬಗ್ಗೆ ಬುಧವಾರ ಬೆಳಗ್ಗೆ ರಾಜಾ ಕ್ಷಮೆ ಕೋರಿದ್ದಾರೆ. “ನನ್ನ ಫೇಸ್ ಬುಕ್ ನಿರ್ವಹಿಸುತ್ತಿರುವ ವ್ಯಕ್ತಿ ನನ್ನ ಅನುಮತಿ ಪಡೆಯದೆ ಈ ಪೋಸ್ಟ್ ಹಾಕಿದ್ದಾರೆ” ಎಂದು ಅವರು ಹೇಳಿದ್ದಾರೆ.
“ಪೆರಿಯಾರ್ ಪ್ರತಿಮೆ ಕುರಿತ ಪೋಸ್ಟ್ ಅನ್ನು ನನ್ನ ಅನುಮತಿ ಇಲ್ಲದೆ ಹಾಕಲಾಗಿದೆ. ಅನಂತರ ನಾನು ಆ ಪೋಸ್ಟ್ ಅನ್ನು ತೆಗೆದೆ. ನಾವು ವಾದವನ್ನು ಪ್ರತಿವಾದದಿಂದಲೇ ಎದುರಿಸಬೇಕು ಹೊರತು ಹಿಂಸಾಚಾರದಿಂದ ಅಲ್ಲ. ಯಾರೊಬ್ಬರ ಭಾವನೆಗಳಿಗೆ ಧಕ್ಕೆ ಉಂಟು ಮಾಡಬೇಕು ಎಂಬ ಉದ್ದೇಶ ನನಗಿಲ್ಲ. ನನ್ನ ಪೋಸ್ಟ್‌ನಿಂದ ಯಾರ ಭಾವನೆಗಳಿಗಾದರೂ ಧಕ್ಕೆ ಉಂಟಾಗಿದ್ದರೆ, ಕ್ಷಮೆ ಕೋರುತ್ತೇನೆ. ಪೆರಿಯಾರ್ ಅವರ ಪ್ರತಿಮೆಗೆ ಹಾನಿ ಉಂಟು ಮಾಡುವುದು ಸ್ವೀಕಾರಾರ್ಹವಲ್ಲ” ಎಂದು ರಾಜಾ ಬುಧವಾರ ತನ್ನ ಎಫ್‌ಬಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆದಾಗ್ಯೂ, ಅವರು ರಾಜಾ ಎಂಬ ಹೆಸರನ್ನು ಉಲ್ಲೇಖಿಸದ, ಮುರಳೀಧರ ರಾವ್ ಹೆಸರಿನ ಟ್ವಿಟ್ಟರ್ ಪೋಸ್ಟ್‌ನಲ್ಲಿ, ಯಾವುದೇ ರೀತಿಯ ಅನುತ್ತೇಜಕ, ಅಗೌರವಯುತ ಹೇಳಿಕೆ ಪೆರಿಯಾರ್ ಅವರಂತಹ ನಾಯಕರ ಪ್ರತಿಮೆ ಧ್ವಂಸಗೊಳಿಸುವುದನ್ನು ಬಿಜೆಪಿ ಒಪ್ಪಿಕೊಳ್ಳದು. ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡವರನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.





