ಹಡಗಿಗೆ ಬೆಂಕಿ: ನಾಲ್ವರು ನಾಪತ್ತೆ

ಮುಂಬೈ, ಮಾ. 7: ಹದಿಮೂರು ಮಂದಿ ಭಾರತೀಯರು ಸೇರಿದಂತೆ 27 ಮಂದಿ ಸಿಬ್ಬಂದಿಯನ್ನು ಒಳಗೊಂಡ ಮೇರ್ಸ್ಕ್ ಕಂಟೈನರ್ ಹಡಗಿನಲ್ಲಿ ಅರೇಬಿಯನ್ ಸಮುದ್ರದ ಲಕ್ಷದ್ವೀಪದ ಸಮೀಪ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಭಾರತೀಯ ತಟ ರಕ್ಷಣಾ ಪಡೆ ತಿಳಿಸಿದೆ.
ಹಡಗಿನಲ್ಲಿದ್ದ ನಾಲ್ವರು ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಇತರರನ್ನು ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 330 ಮೀಟರ್ ಉದ್ದವಿದ್ದ ಮೆರ್ಸ್ಕ್ ಹೋನಮ್ ಹಡಗು ಸಿಂಗಾಪುರದಿಂದ ಸುಯೋಜೆಗೆ ಸಂಚರಿಸುತ್ತಿದ್ದಾಗ ನಿನ್ನೆ ರಾತ್ರಿ ಮುಖ್ಯ ಡೆಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು ಹಾಗೂ ಅನಂತರ ಹರಡಲು ಪ್ರಾರಂಭಿಸಿತು. ಹಡಗಿನ ಅಧಿಕಾರಿಗಳು ಬಗ್ಗೆ ತಟ ರಕ್ಷಣಾ ಪಡೆಗೆ ಮಾಹಿತಿ ನೀಡಿದರು. ಹಡಗು ಲಕ್ಷದ್ವೀಪದ ಅಗಟ್ಟಿಯಿಂದ 570 ಕಿ.ಮೀ. ನಾವಿಕ ಮೈಲು ದೂರಲ್ಲಿತ್ತು. ಕೂಡಲೇ ತಟ ರಕ್ಷಣಾ ಪಡೆ ಸಿಬಂದಿ ಕಾರ್ಯಪ್ರವೃತ್ತರಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮರ್ಚಂಟ್ ಹಡಗು ಎಂ.ವಿ. ಎಲ್ ಸಿಸೆರೊ ಅವಘಡಕ್ಕೀಡಾದ ಹಡಗಿನ ಸಮೀಪ ತಲುಪಿ 23 ಸಿಬ್ಬಂದಿಯನ್ನು ರಕ್ಷಿಸಿತು. ಆದರೆ, ನಾಲ್ವರು ನಾಪತ್ತೆಯಾಗಿದ್ದಾರೆ.





