ರೈತರ ನೊಂದಾಯಿತ ಬ್ಯಾಂಕ್ ಖಾತೆಗಳಿಗೆ ಬೆಳೆ ವಿಮೆ ಮೊತ್ತ : ಜಿಲ್ಲಾಧಿಕಾರಿ

ಚಿಕ್ಕಮಗಳೂರು, ಮಾ.7: ಜಿಲ್ಲೆಯ ಅರ್ಹ ಬೆಳೆ ವಿಮೆ ರೈತರಿಗೆ ಹವಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲಿ 20,777 ಬೆಳೆ ವಿಮಾ ಪ್ರಕರಣಗಳಿಗೆ 46.30 ಕೋಟಿ ಮೊತ್ತವನ್ನು ರೈತರ ನೊಂದಾಯಿತ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರು ಹೇಳಿದರು.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಪ್ರಮುಖ ತೋಟಗಾರಿಕೆ ಬೆಳೆಗಳನ್ನು ಅಧಿಸೂಚಿಸಲು ಅನುವಾಗುವಂತೆ ವೈಜ್ಞಾನಿಕ ಮತ್ತು ನೈಜ ಬೆಳೆ ನಷ್ಟ ಪ್ರತಿಫಲಿಸುವ ಟರ್ಮ್ ಶೀಟ್‍ಗಳನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಸೂಚಿತ 6 ತೋಟಗಾರಿಕೆ ಬೆಳೆಗಳಾದ ಅಡಿಕೆ, ಕಾಳುಮೆಣಸು, ದಾಳಿಂಬೆ, ಮಾವು, ಹಸಿಮೆಣಸಿನಕಾಯಿ ಹಾಗೂ ವೀಳ್ಯೆದೆಲೆ ಬೆಳೆಗಳಿಗೆ ವಿಮಾ ಮೊತ್ತವನ್ನು ಪಾವತಿಸಲಾಗಿದ್ದು, ಯೂನಿವರ್ಸಲ್ ಸೋಂಪು ಜನರಲ್ ಇನ್ಶೂರೆನ್ಸ್ ಕಂಪನಿ ನೀಡಿರುವ ಮಿಂಚಂಚೆ ಮಾಹಿತಿ ಪ್ರಕಾರ ಬೆಳೆ ವಿಮೆಗೆ ಒಬ್ಬ ರೈತ ಕನಿಷ್ಠ 2 ರಿಂದ 3 ಬೆಳೆಗಳನ್ನು ನೊಂದಾಯಿಸಿರುವುದರಿಂದ ಅದರಲ್ಲಿ ಅರ್ಹರಾದ 12,934 ರೈತರನ್ನು 24,193 ಬೆಳೆ ವಿಮೆ ಪ್ರಕರಣಗಳಾಗಿ ವಿಂಗಡಿಸಿದ್ದು ಅದರಲ್ಲಿ 20,777 ಬೆಳೆ ವಿಮಾ ಪ್ರಕರಣಗಳಿಗೆ ವಿಮಾ ಮೊತ್ತ 46.30 ಕೋಟಿ ಸಂದಾಯವಾಗಿದೆ ಎಂದು ತಿಳಿಸಿದರು.
ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರಿಂದ ರೂ.6 ಕೋಟಿಯನ್ನು ಪ್ರೀಮಿಯಮ್ ಮೊತ್ತವಾಗಿ ಪಡೆಯಲಾಗಿದೆ ಎಂದರು. ಈ ಸಂದರ್ಭದಲ್ಲಿ 2016-17 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಕ್ಲೇಮ್ ಪಾವತಿ ವಿವರಗಳನ್ನು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ. ಸತ್ಯಭಾಮ, ತೋಟಗಾರಿಕೆ ಉಪನಿರ್ದೇಶಕಿ ಪೂರ್ಣಿಮಾ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.







