ಸಿಪಿಎಂ ಕಚೇರಿಗೆ ವಾಸ್ತವ್ಯ ಬದಲಿಸಿದ ಮಾಣಿಕ್ ಕುಟುಂಬ
ಶಾಸಕರ ಹಾಸ್ಟೆಲ್ಗೆ ಸ್ಥಳಾಂತರಗೊಳ್ಳಲು ಇಚ್ಛಿಸದ ಮಾಜಿ ಸಿಎಂ
ಅಗರ್ತಲ, ಮಾ.8: ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳ ಸೋಲಿನ ಬಳಿಕ ಮುಖ್ಯಮಂತ್ರಿಯವರ ಅಧಿಕೃತ ನಿವಾಸವನ್ನು ತೆರವು ಮಾಡಿರುವ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್, ತಮ್ಮ ಪತ್ನಿ ಪಾಂಚಾಲಿ ಭಟ್ಟಾಚಾರ್ಜಿಯವರೊಂದಿಗೆ ಸಿಪಿಎಂ ಪಕ್ಷದ ಕಚೇರಿಯ ಮೇಲಿರುವ ಎರಡು ಕೊಠಡಿಗಳ ಫ್ಲ್ಯಾಟ್ಗೆ ಸಂಸಾರ ಸ್ಥಳಾಂತರಿಸಿದ್ದಾರೆ.
ಸರ್ಕಾರ್ ಪತ್ನಿ ಪಾಂಚಾಲಿ ನಿವೃತ್ತ ಕೇಂದ್ರ ಸರ್ಕಾರಿ ಉದ್ಯೋಗಿ. ಸ್ವಂತ ಮನೆ ಇಲ್ಲದ ಸರ್ಕಾರ್, ಶಾಸಕರ ಹಾಸ್ಟೆಲ್ನಲ್ಲಿ ವಾಸ್ತವ್ಯಕ್ಕೆ ಇಚ್ಛೆಪಡದೇ ಕಚೇರಿಯ ಮೇಲಿರುವ ಫ್ಲ್ಯಾಟನ್ನೇ ವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
"ಪಕ್ಷದ ಕಚೇರಿಯಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳಿವೆ. ಇದರಲ್ಲಿ ವಿಶೇಷವೇನೂ ಇಲ್ಲ. ನಮ್ಮ ಬಹುತೇಕ ಮುಖಂಡರು ಸರಳ ಜೀವನ ಸಾಗಿಸುತ್ತಾರೆ" ಎಂದು ಸಿಪಿಎಂ ಕಾರ್ಯದರ್ಶಿ ಬಿಜ್ಜನ್ ಧರ್ ಹೇಳಿದ್ದಾರೆ.
ವಂಶಪಾರಂಪರ್ಯ ಆಸ್ತಿಯನ್ನು ಸಹೋದರಿಗೆ ದಾನವಾಗಿ ನೀಡಿರುವ ಸರ್ಕಾರ್, ಈ ಹಿಂದೆ ಕೂಡಾ ಪಕ್ಷದ ಕಚೇರಿಯಲ್ಲೇ ವಾಸವಿದ್ದರು. ಸರ್ಕಾರ್ ಪತ್ನಿಗೆ ನಗರದಲ್ಲಿ ಆಸ್ತಿ ಇದ್ದರೂ, ಬಿಲ್ಡರ್ ಒಬ್ಬರಿಗೆ ಅದನ್ನು ಹಸ್ತಾಂತರಿಸಿದ ಬಳಿಕ ವಿವಾದ ಸೃಷ್ಟಿಯಾಗಿ, ಕಟ್ಟಡದ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
"ಮಾಜಿ ಮುಖ್ಯಮಂತ್ರಿಯಾಗಿ ಸರ್ಕಾರ್ ಅವರಿಗೆ ಸರ್ಕಾರಿ ವಸತಿ ಹಾಗೂ ಶಿಷ್ಟಾಚಾರದ ಸೌಲಭ್ಯಗಳಿವೆ" ಎಂದು ನಿಯೋಜಿತ ಮುಖ್ಯಮಂತ್ರಿ ಬಿಪ್ಲಬ್ ದೇಬ್ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರಿಗೂ ಕ್ಯಾಬಿನೆಟ್ ಸಚಿವರ ಸ್ಥಾನಮಾನವಿದೆ. ಇತರ ಶಾಸಕರನ್ನು ಹಾಸ್ಟೆಲ್ನಲ್ಲಿ ಇರಿಸಲಾಗುತ್ತದೆ ಎಂದು ಹೇಳಿದ್ದಾರೆ.