ಬೆಂಗಳೂರು: ಲೋಕಾಯುಕ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ
ಬೆಂಗಳೂರು, ಮಾ.8: ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್‌ಶೆಟ್ಟಿ ಅವರ ಮೇಲೆ ಹತ್ಯೆ ಯತ್ನ ಖಂಡಿಸಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಗುರುವಾರ ನಗರದ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಸರಕಾರ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್‌ನ ಮುಖಂಡ ಟಿ.ಎ. ಶರವಣ, ಲೋಕಾಯುಕ್ತರ ಮೇಲೆ ಹಾಡುಹಗಲೆ ಚಾಕುವಿನಿಂದ ಇರಿಯಲಾಗಿದೆ. ಲೋಕಾಯುಕ್ತರ ಮೇಲೆ ಈ ರೀತಿ ಹಲ್ಲೆ ನಡೆದರೆ ಜನಸಾಮಾನ್ಯರ ಪಾಡೇನು. ಅಲ್ಲದೆ, ಲೋಕಾಯುಕ್ತದ ಇತಿಹಾಸದಲ್ಲೇ ಇಂತಹ ಘಟನೆ ನಡೆದಿರಲಿಲ್ಲ. ಇದಕ್ಕೆ ಸರಕಾರದ ಆಡಳಿತ ವೈಫಲ್ಯವೇ ಕಾರಣ ಎಂದರು.
ಕಾಂಗ್ರೆಸ್ ಸರಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಒಂದಾದ ಮೇಲೊಂದರಂತೆ ನಡೆಯುತ್ತಿರುವ ಘಟನೆಗಳು ರಾಜ್ಯದ ಜನರನ್ನು ಭಯಭೀತರನ್ನಾಗಿಸಿದೆ ಎಂದ ಅವರು, ವಿಧಾನಸೌಧದ ಪಕ್ಕದಲ್ಲಿಯೇ ಇರುವ ಲೋಕಾಯುಕ್ತ ಕಚೇರಿಯಲ್ಲಿ ಇಂತಹ ಘಟನೆ ನಡೆದಿರುವುದು ಗೃಹ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸಿದೆ ಎಂದು ಆಪಾದಿಸಿದರು.
ಬಿಬಿಎಂಪಿ ಪಾಲಿಕೆ ಸದಸ್ಯೆ ನೇತ್ರಾ ನಾರಾಯಣ ಮಾತನಾಡಿ, ಮಧ್ಯಾಹ್ನದ ವೇಳೆ ಇಂತಹ ಘಟನೆ ನಡೆದಿರುವುದು ರಾಜ್ಯ ಸರಕಾರದ ಭದ್ರತಾ ವೈಫಲ್ಯವನ್ನು ಎತ್ತಿ ತೋರಿಸಿದಂತಾಗಿದೆ. ಈ ಘಟನೆಗೆ ಗೃಹ ಇಲಾಖೆ ನೈತಿಕ ಹೊಣೆ ಹೊರಬೇಕು ಎಂದು ಹೇಳಿದರು.







