ಇಷ್ಟು ಹಣವಿದ್ದರೆ ‘ಹಾರುವ ಕಾರು’ ನಿಮ್ಮದಾಗಬಹುದು

ರಸ್ತೆಯಲ್ಲಿ ಓಡುವ, ಹಾಗೆಯೇ ಆಗಸದಲ್ಲಿ ಹಾರಾಡುವ ಕಾರು ಮುಂದಿನ ವರ್ಷ ಮಾರಾಟಕ್ಕೆ ಲಭ್ಯವಾಗಲಿದೆ. ಡಚ್ ಕಂಪನಿ ಪಾಲ್-ವಿ ಇಂಟರ್‌ನ್ಯಾಷನಲ್ ಬಿ.ವಿ.ಯ ಸಿಇಒ ರಾಬರ್ಟ್ ಡಿಂಗ್‌ಮ್ಯಾನ್ಸೆ ಅವರ ಕನಸಿನ ಕೂಸಾಗಿರುವ, ಆಗಸದಲ್ಲಿ ಹಾರುವ ಕಾರು ಮತ್ತು ರಸ್ತೆಯಲ್ಲಿ ಓಡುವ ವಿಮಾನ ‘ಪಾಲ್-ವಿ ಲಿಬರ್ಟಿ’ಯ ಮಾದರಿಯನ್ನು ಸ್ವಿಟ್ಝಲ್‌ಲಂಡ್‌ನ ಜಿನೆವಾದಲ್ಲಿ ನಡೆಯುತ್ತಿರುವ 88ನೇ ಜಿನೆವಾ ಇಂಟರ್‌ನ್ಯಾಷನಲ್ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾಗಿದೆ.
ಪಾಲ್-ವಿ ಲಿಬರ್ಟಿ ಮೂರು ಚಕ್ರಗಳ ಮತ್ತು ಎರಡು ಆಸನಗಳ ಕಾರು ಹಾಗೂ ಹೆಲಿಕಾಪ್ಟರ್ ಒಂದರಲ್ಲೇ ಮೇಳೈಸಿರುವ ಆಧುನಿಕ ವಾಹನವಾಗಿದೆ. ಮುಂದಿನ ವರ್ಷದಿಂದ ಈ ಕಾರು ಗ್ರಾಹಕರಿಗೆ ಲಭ್ಯವಾಗಲಿದೆ.
ಪಾಲ್-ವಿ ಲಿಬರ್ಟಿ ರಸ್ತೆಯಲ್ಲಿ ಗಂಟೆಗೆ 170 ಕಿ.ಮೀ. ಮತ್ತು ಆಗಸದಲ್ಲಿ ಗಂಟೆಗೆ 180 ಕಿ.ಮೀ.ವೇಗದಲ್ಲಿ ಚಲಿಸುತ್ತದೆ. ಮಾಮೂಲು ಸೀಸರಹಿತ ಇಂಧನವನ್ನು ಒಂದು ಬಾರಿ ಟ್ಯಾಂಕಿಗೆ ತುಂಬಿಸಿದರೆ ಅದು 500 ಕೀ.ಮೀ.ಗಳಷ್ಟು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.
ಈ ಕಾರು ವಿಮಾನವಾಗಿ ಕಾರ್ಯ ನಿರ್ವಹಿಸುವಾಗ ಎರಡು ಇಂಜಿನ್‌ಗಳಿಂದ ಚಾಲಿತ, ಹಿಂಭಾಗದಲ್ಲಿ ಅಳವಡಿಸಿರುವ ಪ್ರೊಪೆಲ್ಲರ್ ಅದನ್ನು ಮುಂದಕ್ಕೆ ತಳ್ಳುತ್ತದೆ. ಅದನ್ನು ಸ್ಥಿರಗೊಳಿಸಲು ಮೇಲ್ಭಾಗದಲ್ಲಿ ಬೃಹತ್ ರೋಟರ್‌ನ್ನು ಅಳವಡಿಸಲಾಗಿದ್ದು, ಇದು ಸುರಕ್ಷತೆಯನ್ನು ಹೆಚ್ಚಿಸುತ್ತದೆ.
ಈ ಹಾರಾಡುವ ಕಾರನ್ನು ನೆಲಕ್ಕಿಳಿಸಿದಾಗ ಅದರ ರೋಟರ್ ಮತ್ತು ಪ್ರೊಪೆಲ್ಲರ್ ಮಡಚಿಕೊಳ್ಳುತ್ತವೆ ಹಾಗೂ ಬಾಲವು ಒಳಗೆ ಸೇರಿಕೊಳ್ಳುವ ಮೂಲಕ ‘ಪಾಲ್-ವಿ’ ರಸ್ತೆಯಲ್ಲಿ ಚಾಲನೆಗೆ ಸಜ್ಜಾಗುತ್ತದೆ.
ರಸ್ತೆಯಲ್ಲಿ ಓಡುತ್ತಿರುವಾಗ ಗಾಳಿಯಲ್ಲಿ ಹಾರಾಡಬೇಕು ಎಂದಿದ್ದರೆ ಅಗತ್ಯದ ತಪಾಸಣೆಗಳು ಸೇರಿದಂತೆ ಅದನ್ನು ಹೆಲಿಕಾಪ್ಟರ್ ಆಗಿ ಪರಿವರ್ತಿಸಲು 10 ನಿಮಿಷಗಳು ಸಾಕು.
ಅಂದ ಹಾಗೆ ಈ ಕಾರು ರಸ್ತೆಯಲ್ಲಿ ಚಲಿಸುತ್ತಿರುವಾಗ ಟ್ರಾಫಿಕ್ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡರೆ ಗಾಳಿಯಲ್ಲಿ ಲಂಬವಾಗಿ ಮೇಲಕ್ಕೇರುವ ಮೂಲಕ ಅದರಿಂದ ಪಾರಾಗಬಹುದು ಎಂದು ಯೋಚಿಸಬೇಡಿ. ಟೇಕ್ ಆಫ್ ಮತ್ತು ಲ್ಯಾಂಡ್ ಆಗಲು ‘ಪಾಲ್-ವಿ’ಗೆ ಕಿರು ರನ್‌ವೇ ಅಥವಾ ಹುಲ್ಲಿನ ಏರ್‌ಸ್ಟ್ರಿಪ್ ಅಗತ್ಯವಿದೆ.
ಮುಂದಿನ ವರ್ಷ ಮೊದಲ ತಂಡದಲ್ಲಿ 90 ಕಾರುಗಳು ಹೊರಬರಲಿದ್ದು, ಮಾರಾಟ ಬೆಲೆ 6,15,000 ಡಾಲರ್(ಸುಮಾರು ನಾಲ್ಕು ಕೋಟಿ ರೂ.)ಗಳಿಗೆ ನಿಗದಿಯಾಗುವ ನಿರೀಕ್ಷೆಯಿದೆ. ಆದರೆ ಈ ಹಾರಾಡುವ ಕಾರನ್ನು ಜೇಬಿನಲ್ಲಿ ನಾಲ್ಕು ಕೋ.ರೂ.ಗಳಿರುವ ಎಲ್ಲರೂ ಖರೀದಿಸುವಂತಿಲ್ಲ. ಕಾರನ್ನು ಖರೀದಿಸುವವರು ಅದರ ಹಾರಾಟ ನಡೆಸಲು ಪ್ರಮಾಣೀಕೃತ ಹೆಲಿಕಾಪ್ಟರ್ ಪೈಲಟ್‌ಗಳಾಗಬೇಕಾಗುತ್ತದೆ. ಇದಕ್ಕೆ ತರಬೇತಿಯನ್ನು ಕಂಪನಿಯೇ ನೀಡಲಿದೆ.







