ಮೋದಿ ಮಾತುಕತೆ ವಿಫಲ: ಟಿಡಿಪಿ ಸಚಿವರಿಂದ ಕೇಂದ್ರ ಸಂಪುಟಕ್ಕೆ ರಾಜೀನಾಮೆ

ಹೈದರಾಬಾದ್, ಮಾ. 8: ಪ್ರಧಾನಿ ನರೇಂದ್ರ ಮೋದಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಅವರಲ್ಲಿ ಮನವಿ ಮಾಡಿಕೊಂಡ ಹೊರತಾಗಿಯೂ ಟಿಡಿಪಿಯ ಸಚಿವರಾದ ಪಿ. ಅಶೋಕ್ ಗಜಪತಿ ರಾಜು (ನಾಗರಿಕ ವಿಮಾನ ಯಾನ) ಹಾಗೂ ವೈ.ಎಸ್. ಚೌಧರಿ (ವಿಜ್ಞಾನ ಮತ್ತು ತಂತ್ರಜ್ಞಾನ) ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಇಬ್ಬರು ಸಚಿವರು ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ತೆರಳಿ, ಆಂಧ್ರಪ್ರದೇಶಕ್ಕೆ ಕೇಂದ್ರ ವಿಶೇಷ ಸ್ಥಾನ ಮಾನ ನೀಡದ ಹಿನ್ನೆಲೆಯಲ್ಲಿ ಪಕ್ಷದ ನಿರ್ಧಾರದಂತೆ ರಾಜೀನಾಮೆ ನೀಡಿದರು. ನಾವು ಎನ್‌ಡಿಎಯ ಭಾಗವಾಗಿ ಮುಂದುವರಿಯುತ್ತೇವೆ. ಆದರೆ, ಯಾವುದೇ ಸಚಿವ ಸ್ಥಾನದಲ್ಲಿ ಮುಂದುವರಿಯುವುದಿಲ್ಲ. ಇದರಲ್ಲಿ ತಪ್ಪಿದೆ ಎಂದು ನಾವು ಭಾವಿಸುವುದಿಲ್ಲ. ಈ ವಿಷಯದ ಕುರಿತು ಪ್ರಧಾನಿ ಅವರು ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದಾರೆ ಎಂದು ನಾವು ಭಾವಿಸುವುದಿಲ್ಲ ಎಂದು ವೈ.ಎಸ್. ಚೌಧರಿ ಹೇಳಿದ್ದಾರೆ.
ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡುವಂತೆ ಟಿಡಿಪಿಯ ಇಬ್ಬರು ಸಚಿವರಿಗೆ ಚಂದ್ರಬಾಬು ನಾಯ್ಡು ಬುಧವಾರ ಸೂಚಿಸಿದ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ಇದ್ದ ಬಿಜೆಪಿಯ ಇಬ್ಬರು ಸಚಿವರಾದ ರಾಜ್ಯ ಆರೋಗ್ಯ ಸಚಿವ ಕಾಮಿನೇನಿ ಶ್ರೀನಿವಾಸ್ ಹಾಗೂ ರಾಜ್ಯ ದತ್ತಿ ಸಚಿವ ಪಿಡಿಕೊಂಡಾಲ ಮಾಣಿಕ್ಯಾಲಾಲ ರಾವ್ ರಾಜ್ಯ ಸಂಪುಟಕ್ಕೆ ತಮ್ಮ ರಾಜೀನಾಮೆ ಸಲ್ಲಿಸಿದರು. ಇದು ಮೊದಲ ಹೆಜ್ಜೆ. ಮುಂದೆ ಮತ್ತೊಂದು ಹೆಜ್ಜೆಯನ್ನು ನಾವು ಇರಿಸಲಿದ್ದೇವೆ ಎಂದು ನಾಯ್ಡು ಹೇಳಿದ್ದಾರೆ. ‘‘ನೀವು ಈಶಾನ್ಯ ರಾಜ್ಯಗಳಿಗೆ ಬೆಂಬಲ ನೀಡುತ್ತೀರಿ. ಆದರೆ, ಆಂಧ್ರಪ್ರದೇಶದ ಬಗ್ಗೆ ಅದೇ ನಿಲುವು ತೋರಿಸುತ್ತಿಲ್ಲ. ನೀವು ಈಶಾನ್ಯ ರಾಜ್ಯಗಳಿಗೆ ಕೈಗಾರಿಕೆ ಉತ್ತೇಜಕಗಳನ್ನು ನೀಡುತ್ತೀರಿ. ಆಂಧ್ರಪ್ರದೇಶಕ್ಕೆ ನೀಡುತ್ತಿಲ್ಲ. ಯಾಕೆ ಈ ತಾರತಮ್ಯ’’ ಎಂದು ಅವರು ಪ್ರಶ್ನಿಸಿದ್ದಾರೆ.







