ಪಾಸ್‌ಪೋರ್ಟ್ ಅಮಾನತುಗೊಂಡಿದೆ, ಭಾರತಕ್ಕೆ ಹೇಗೆ ಮರಳಲಿ?
ಸಿಬಿಐಗೆ ಮೇಹುಲ್ ಚೋಕ್ಸಿ ಪ್ರಶ್ನೆ

ಹೊಸದಿಲ್ಲಿ,ಮಾ.8: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಸುಮಾರು ಎರಡು ಶತಕೋಟಿ ಡಾಲರ್ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿನ್ನಾಭರಣ ವ್ಯಾಪಾರಿ ಮೇಹುಲ್ ಚೋಕ್ಸಿ ಸಿಬಿಐಗೆ ಪತ್ರವೊಂದನ್ನು ಬರೆದು, ತನ್ನ ಪಾಸ್‌ಪೋರ್ಟ್‌ನ್ನು ಅಮಾನತು ಮಾಡಲಾಗಿದೆ, ತಾನು ಭಾರತಕ್ಕೆ ಮರಳುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ.
ತಾನು ಭಾರತಕ್ಕೆ ಮರಳಿ ಪ್ರಯಾಣಿಸುವುದು ಅಸಾಧ್ಯ. ತನ್ನ ಪಾಸ್‌ಪೋರ್ಟ್‌ನ್ನು ಏಕೆ ಅಮಾನತು ಮಾಡಲಾಗಿದೆ ಮತ್ತು ತಾನು ಭಾರತಕ್ಕೆ ಹೇಗೆ ಭದ್ರತಾ ಬೆದರಿಕೆಯಾಗಿದ್ದೇನೆ ಎನ್ನುವುದಕ್ಕೆ ಮುಂಬೈನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯು ತನಗೆ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಚೋಕ್ಸಿ ಮಾ.7ರಂದು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ವಜ್ರ ವ್ಯಾಪಾರಿಗಳ ನಡುವೆ ‘ಪಪ್ಪು’ ಎಂದೇ ಹೆಸರಾಗಿರುವ ಚೋಕ್ಸಿ, ಮುಂಬೈಯಲ್ಲಿ ವ್ಯಾಪಾರವನ್ನು ಆರಂಭಿಸಿ ಕ್ರಮೇಣ 22 ಸ್ವಂತದ ಕಂಪನಿಗಳನ್ನು ಹೊಂದಿದ್ದು, ಬಾಲಿವುಡ್ ವಲಯದಲ್ಲಿ ಚಿರಪರಿಚಿತ ಮುಖವಾಗಿದ್ದ. ವಂಚನೆ ಪ್ರಕರಣದ ತನಿಖೆಯು ತನ್ನ ಕಂಪನಿಗಳವರೆಗೂ ತಲುಪುತ್ತಿದ್ದಂತೆ ಚೋಕ್ಸಿ, ತನಿಖಾಸಂಸ್ಥೆಗಳು ಪೂರ್ವ ನಿರ್ಧಾರದೊಡನೆ ಕಾರ್ಯಾಚರಿಸುತ್ತಿವೆ ಮತ್ತು ನ್ಯಾಯದ ಹಾದಿಯಲ್ಲಿ ಹಸ್ತಕ್ಷೇಪ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ.
ಕಳೆದ ತಿಂಗಳು ವಂಚನೆ ಪ್ರಕರಣದ ಪ್ರಮುಖ ಆರೋಪಿ ನೀರವ್ ಮೋದಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಹೊರಡಿಸಿತ್ತಾದರೂ, ಇ-ಮೇಲ್‌ವೊಂದನ್ನು ರವಾನಿಸಿದ್ದ ಅವರು, ತನ್ನ ಗೈರುಹಾಜರಿಗೆ ತನ್ನ ಪಾಸ್‌ಪೋರ್ಟ್‌ನ್ನು ಅಮಾನತುಗೊಳಿಸಿರುವುದನ್ನು ಕಾರಣವನ್ನಾಗಿ ನೀಡಿದ್ದರು.







