ಸಂವಿಧಾನದ ಆಶಯಗಳಿಗೆ ಕೊಡಲಿಪೆಟ್ಟು ನೀಡುತ್ತಿರುವ ಕೇಂದ್ರ ಸರಕಾರ: ಪ್ರಕಾಶ್ ಅಂಬೇಡ್ಕರ್

ಬೆಂಗಳೂರು, ಮಾ.8: 2014ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಆರೆಸೆಸ್ಸ್-ಬಿಜೆಪಿಯ ಸರಕಾರ ಅಧಿಕಾರಕ್ಕೆ ಬಂದ ನಂತರ ಸಂವಿಧಾನದ ಆಶಯಗಳಿಗೆ ಕೊಡಲಿಪೆಟ್ಟು ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ಅಖಿಲ ಭಾರತ ಭಾರಿಪಾ ಬಹುಜನ ಮಹಾಸಂಘದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ನಗರದಲ್ಲಿ ಜಮೀಯತ್ ಉಲೇಮಾ-ಕರ್ನಾಟಕ ಆಯೋಜಿಸಿದ್ದ ‘ನಮ್ಮ ದೇಶ, ನಮ್ಮ ಭವಿಷ್ಯ, ನಮ್ಮ ಕರ್ತವ್ಯ’ ಚರ್ಚಾಗೋಷ್ಠಿಯ ಬಳಿಕ ಅವರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಚುನಾವಣೆ ನಡೆದು ಯಾವುದೆ ಹೊಸ ಸರಕಾರ ಅಧಿಕಾರಕ್ಕೆ ಬರಲಿ, ಸಂವಿಧಾನದ ಚೌಕಟ್ಟಿನಡಿಯಲ್ಲಿ ತನ್ನ ಕಾರ್ಯನಿರ್ವಹಣೆ ಮಾಡುತ್ತದೆ ಎಂಬುದು ನಮ್ಮ ನಂಬಿಕೆ. ಆದರೆ, ಈಗ ಅಧಿಕಾರದಲ್ಲಿರುವ ಪಕ್ಷ ಜನರ ನಂಬಿಕೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಜನ ಸಾಮಾನ್ಯರ ಮೂಲಭೂತ ಹಕ್ಕುಗಳನ್ನು ಕಸಿಯುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಆಡಲಾಗುತ್ತಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಜನ ಜಾಗೃತಿ ಅಗತ್ಯ. ಫ್ಯಾಶಿಸ್ಟ್ ಶಕ್ತಿಗಳು ಹೆದರುವುದು ಜನಶಕ್ತಿಗೆ ಮಾತ್ರ ಎಂದು ಪ್ರಕಾಶ್ ಅಂಬೇಡ್ಕರ್ ತಿಳಿಸಿದರು.
ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ. ಒಂದು ಕಾಲದಲ್ಲಿ ರಷ್ಯಾ ಭಾರತದ ಆಪ್ತಮಿತ್ರವಾಗಿದ್ದು. ಈ ಘಟನೆಯನ್ನು ಖಂಡಿಸಿ ರಷ್ಯಾದಲ್ಲಿ ಪ್ರತಿಭಟನೆಗಳು ಆರಂಭವಾಗಿಲ್ಲ. ಆದರೆ, ಈ ಸರಕಾರದ ನೀತಿಗಳು, ವಿದೇಶಗಳೊಂದಿಗೆ ಏರ್ಪಡುತ್ತಿರುವ ಸಂಬಂಧಗಳು ದೇಶಕ್ಕೆ ನಷ್ಟ ಉಂಟು ಮಾಡಬಹುದು. ಅಲ್ಲದೆ, ಅನಿವಾಸಿ ಭಾರತೀಯರಿಗೂ ತೊಂದರೆಯುಂಟು ಮಾಡಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ನಾವು ಧ್ವನಿ ಎತ್ತಬೇಕು. ಈ ದೇಶದ ನಿಜವಾದ ಮಾಲಕ ರಾಜಕಾರಣಿಗಳಲ್ಲ, ಮತದಾರ ಎಂಬ ಸತ್ಯವನ್ನು ಮನವರಿಕೆ ಮಾಡಿಕೊಡಬೇಕು. ಸಮಾಜವನ್ನು ಒಡೆಯುವ ಕೆಲಸಕ್ಕೆ ಈ ಸರಕಾರ ಕೈ ಹಾಕಿದೆ. ಅದನ್ನು ತಡೆದು ಸಹೋದರತೆಯನ್ನು ಕಾಪಾಡಲು ನಾವು ಪ್ರಯತ್ನಿಸಬೇಕಿದೆ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದರು.
ಇಂದಿನ ಸಭೆಯಲ್ಲಿ ನಾವು ಹಲವಾರು ವಿಚಾರಗಳನ್ನು ಆಂತರಿಕವಾಗಿ ಚರ್ಚೆ ಮಾಡಿದ್ದೇವೆ. ಹಲವು ನಿರ್ಣಯಗಳನ್ನು ಕೈಗೊಂಡಿದ್ದೇವೆ. ಜನರ ಮಧ್ಯೆ ಹೋಗಿ ಧ್ವನಿ ಎತ್ತಿ, ಜಾಗೃತಿ ಮೂಡಿಸುತ್ತೇವೆ ಎಂದ ಅವರು, ರಾಜ್ಯದ ಚುನಾವಣೆಗೆ ಸಂಬಂಧಿಸಿದಂತೆ ಯಾವುದೆ ಚರ್ಚೆ ನಡೆದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಜಮೀಯತ್ ಉಲೇಮಾ ಹಿಂದ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವೌಲಾನಾ ಮಹಮೂದ್ ಮದನಿ ಮಾತನಾಡಿ, ಬಹುಸಂಸ್ಕೃತಿಯ ಈ ದೇಶವನ್ನು ಒಂದೇ ಸಂಸ್ಕೃತಿಯ ಅಡಿಯಲ್ಲಿ ತರಲು ಪ್ರಯತ್ನಿಸಲಾಗುತ್ತಿದೆ. ಸಮಾನ ಮನಸ್ಕರೊಂದಿಗೆ ಸೇರಿ ಈ ಬಗ್ಗೆ ಸೈದ್ಧಾಂತಿಕವಾದ ಹೋರಾಟವನ್ನು ನಡೆಸಲಿದ್ದೇವೆ ಎಂದರು.
ಅವರು ಮನಸ್ಸುಗಳನ್ನು ಒಡೆಯುವ ಕೆಲಸ ಮಾಡಲಿ, ನಾವು ಮನಸ್ಸುಗಳನ್ನು ಒಂದೂಗೂಡಿಸುವ ಕೆಲಸ ಮಾಡುತ್ತೇವೆ. ನಮ್ಮ ಹೋರಾಟವು ರಾಜಕೀಯವಾಗಿರುವುದಿಲ್ಲ, ಸಾಮಾಜಿಕವಾಗಿರಲಿದೆ ಎಂದು ಅವರು ಹೇಳಿದರು.
ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, ಭಾರತದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ. ಆದಿವಾಸಿಗಳು, ದಲಿತರು ಹಾಗೂ ಮುಸ್ಲಿಮರನ್ನು ಗುರಿಯನ್ನಾಗಿಸಿಕೊಂಡು ದಾಳಿ ಮಾಡಲಾಗುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದರು.
ದೇಶದ ಅಖಂಡತೆ, ಪ್ರಜಾಪ್ರಭುತ್ವ, ಸಂವಿಧಾನವನ್ನು ಕಾಪಾಡಲು ಅನುಸರಿಸಬೇಕಾದ ಮಾರ್ಗಗಳ ಕುರಿತು ಇಂದಿನ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಲಾಗಿದೆ. ಸಮ ಸಮಾಜ ನಿರ್ಮಾಣಕ್ಕೆ ನಾವು ಸಂಕಲ್ಪ ತೊಟ್ಟಿದ್ದೇವೆ. ಮತದಾರರಿಂದ ಮಾತ್ರ ಬದಲಾವಣೆ ಸಾಧ್ಯ. ಅವರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇವೆ. ಈ ದೇಶದಲ್ಲಿ ಮನುಸ್ಮತಿ ಜಾರಿಗೆ ಯಾವುದೆ ಕಾರಣಕ್ಕೂ ಅವಕಾಶ ನೀಡಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಚಾಲಕ ಮೌಲಾನಾ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಜಮೀಯತ್ ಉಲೇಮಾ ಕರ್ನಾಟಕದ ಅಧ್ಯಕ್ಷ ಮುಫ್ತಿ ಇಫ್ತೆಖಾರ್ ಅಹ್ಮದ್ ಖಾಸ್ಮಿ, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







