ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ: ಕುಮಾರಸ್ವಾಮಿ
ಹಾಸನದಲ್ಲಿ ವಿಕಾಸ ಸಮಾವೇಶ
.jpg)
ಹಾಸನ,ಮಾ.8: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದರ ಜೊತೆಗೆ ನಮ್ಮವಧಿಯಲ್ಲಿ ರಾಜ್ಯ ಸರಕಾರದಿಂದಲೇ ಹಾಸನ ಜಿಲ್ಲೆಗೆ ಐಐಟಿ ತರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದರು.
ನಗರದ ರಿಂಗ್ ರಸ್ತೆ, ಮಾಸ್ಟರ್ ಕಾಲೇಜು ಬಳಿ ಮೈದಾನದಲ್ಲಿ ಗುರುವಾರ ಮದ್ಯಾಹ್ನ ಜೆಡಿಎಸ್ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ವಿಕಾಸ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾವು ಮಣ್ಣಿನ ಮಕ್ಕಳು ಮತ್ತು ಮಣ್ಣನ್ನು ಎಂದಿಗೂ ಮರೆಯುವುದಿಲ್ಲ. ನನ್ನ ಅಧಿಕಾರವಧಿಯಲ್ಲಿ ರೈತರ ಸಾಲಮನ್ನಾದ ಘೋಷಣೆ ಮಾಡಿದ 25 ದಿನಗಳಲ್ಲಿ ರಶೀದಿಯನ್ನು ಮನೆ ಬಾಗಿಲಿಗೆ ನೀಡಿರುವುದನ್ನು ಯಾವ ಪಕ್ಷ ಮಾಡಿದೆ. ಇದು ಒಂದು ದಾಖಲೆಯಲ್ಲವೇ ಎಂದು ಹೇಳಿದರು.
ಇಂದು ರಾಷ್ಟ್ರೀಕೃತ ಬ್ಯಾಂಕ್, ಸಹಕಾರ ಬ್ಯಾಂಕ್ ಹಾಗೂ ಪಿಎಲ್‍ಡಿ ಬ್ಯಾಂಕುಗಳು ಸೇರಿ ರೈತರು ಒಟ್ಟು 51 ಸಾವಿರ ಕೋಟಿ ರೂ ಸಾಲ ಮಾಡಿದ್ದಾರೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ತಕ್ಷಣ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವಜನಿಕರ ಎದುರು ಜೂನ್‍ನಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮೊದಲು ಬಂದು ಆಮೇಲೆ ಮಾತನಾಡಲಿ ಎಂದ ಅವರು, ಸಿಎಂ ಮತ್ತೆ ಅಧಿಕಾರಕ್ಕೆ ಬಂದರೇ ತಾನೆ? ರೈತರ 51 ಸಾವಿರ ಕೋಟಿ ರೂ ಸಾಲಮನ್ನಾ ಮಾಡುವುದು ಸುಲಭವಲ್ಲ. ಆದರೇ ನಮ್ಮಪ್ಪ ನನಗೆ ಬುದ್ದಿ ಕಲಿಸಿದ್ದಾರೆ. ಯಾವ ರೀತಿ ಸಾಲಮನ್ನಾ ಮಾಡಬೇಕು, ಹಾಗೆಯೇ ಅದನ್ನು ಯಾವ ರೀತಿ ಭರಿಸಬಹುದು ಎಂದು ತಿಳಿದಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ 1 ಲಕ್ಷದ 35 ಸಾವಿರ ಕೋಟಿ ರೂಗಳನ್ನು ಸಾಲ ಮಾಡಿದ್ದಾರೆ. ಇವರ ಹಾಗೆ ನಾನು ಸುಳ್ಳು ಹೇಳುವವನಲ್ಲ ಎಂದರು.
ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಅವರ ಪರ್ಸಂಟೇಜ್ ಬಗ್ಗೆ ನಾನು ಹೇಳಲ್ಲ. ರಾಜ್ಯದಲ್ಲಿ 15 ಸಾವಿರ ಮನೆ ನಿರ್ಮಿಸಿರುವುದಾಗಿ ಹೇಳಿದ್ದಾರೆ. ಗುಡಿಸಲು ಮನೆ ಎಂಬುದು ನಿಮ್ಮ ಜಾಹಿರಾತುಗಳಲ್ಲಿ ತೋರಿಸಿದ್ದೀರಿ. ಇನ್ನು ನೀರಾವರಿ ಮಂತ್ರಿ ಅವರು ಬಣ್ಣ ಬಳೆದುಕೊಂಡು ಯಾವದೋ ಪೈಪು ಇರುವ ಚಿತ್ರದಲ್ಲಿ ನೀರು ಹರಿಯುವುದನ್ನು ಜಾಹಿರಾತುಗಳಲ್ಲಿ ಹಾಕಿಕೊಂಡಿರುವುದಾಗಿ ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಐಐಟಿ ತರುವುದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಮತ್ತು ಮಾಜಿ ಸಚಿವ ಹೆಚ್.ಡಿ. ರೇವಣ್ಣರ ದೊಡ್ಡ ಆಸೆಯಾಗಿದೆ. ಸ್ಥಳೀಯ ಶಾಸಕ ಹೆಚ್.ಎಸ್. ಪ್ರಕಾಶ್ ಅವರು ಭೂಸ್ವಾಧೀನ ಮಾಡಿಕೊಂಡಿರುವ ಬಗ್ಗೆ ಅಸಮಧಾನವಿದೆ. ಸುಮಾರು 1 ಸಾವಿರ ಎಕರೆ ಭೂಮಿ ಇರಬಹದು. ಮುಂದೆ ಇಂತಹ ಕೆಲಸ ಮಾಡಿ ಬೀದಿಗೆ ಯಾರನ್ನು ತರುವುದಿಲ್ಲ. ಐಐಟಿ ಇಲ್ಲಿಗೆ ಆಗುವ ವೇಳೆ ಕೊನೆಯಲ್ಲಿ ಉತ್ತರ ಕರ್ನಾಟಕಕ್ಕೆ ಕೊಡಲಾಯಿತು. ಅಲ್ಲಿಗೆ ನೀಡಿರುವ ಬಗ್ಗೆ ಯಾವ ಭಿನ್ನಾಭಿಪ್ರಾಯವಿಲ್ಲ. ಆದರೆ ಜಿಲ್ಲೆಗೆ ಮತ್ತೊಂದು ಐಐಟಿ ಕೊಡುತ್ತಾರ ಎಂಬುವುದು ಗೊತ್ತಿಲ್ಲ. ಕೇಂದ್ರದಿಂದ ಐಐಟಿ ಆಗದಿದ್ದರೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ರಾಜ್ಯದಿಂದಲೇ ತರುವ ಕೆಲಸ ಮಾಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ರೈತರು ಬೆಳೆದ ಆಲೂಗೆಡ್ಡೆ, ಶುಂಠಿ, ಸೇರಿದಂತೆ ಇತರೆ ಯಾವುದೇ ಬೆಳೆ ಸರಿಯಾಗಿ ಬಾರದೆ ನಷ್ಟ ಅನುಭವಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತದಾರರು ಯಾವುದೇ ಆಸೆ ಆಕಾಂಕ್ಷೆಗಳಿಗೆ ಒಳಗಾಗದೆ ಜೆಡಿಎಸ್‍ಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ನಾವು ಬಿಜೆಪಿ ಮತ್ತು ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಿ ಸಮ್ಮಿಶ್ರ ಸರಕಾರ ಮಾಡುವುದಿಲ್ಲ. 113 ಸ್ಥಾನದ ಗುರಿ ಮುಟ್ಟುವ ಕೆಲಸ ಮಾತ್ರ ಮಾಡುವುದಾಗಿ ಹೇಳಿದರು. ಯುವಕರಿಗೆ ಉದ್ಯೋಗ ಕೊಡಬೇಕು. ನಮ್ಮ ಸರಕಾರ ಅಧಿಕಾರಕ್ಕೆ ಬಂದ ತಕ್ಷಣ ಇಸ್ರೆಲ್‍ನಿಂದ 200 ಜನ ಸಂಶೋಧಕರನ್ನು ರಾಜ್ಯಕ್ಕೆ ಕರೆತಂದು ಇಲ್ಲಿ ಬೆಳೆಯುವ ಆಲೂಗೆಡ್ಡೆ ಬಿತ್ತನೆ ಬಗ್ಗೆ ಹೊಸ ವ್ಯವಸ್ಥೆ ಮಾಡಲಾಗುವುದು. ಬೆಳೆಯುವ ಪ್ರತಿ ಬೆಳೆಗೆ ಲಾಭ ಇರಬೇಕು. ಅಂತಹ ವಾತವರಣ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.
68 ವರ್ಷ ಮೇಲ್ಪಟ್ಟ ರೈತರಿಗೆ ನಮ್ಮ ಅವಧಿಯಲ್ಲಿ 5 ಸಾವಿರ ರೂ.ಗಳ ಗೌರವ ಧನ ಸಿಗುವಂತೆ ಮಾಡಲಾಗುವುದು. ಖಾಸಗಿ ಶಾಲೆಯ ಸೌಲಭ್ಯವನ್ನು ಸರಕಾರಿ ಶಾಲೆಯಲ್ಲಿ ತರುವುದು, ಖಾಸಗಿ ಆಸ್ಪತ್ರೆಯಂತೆ ಸರಕಾರಿ ಆಸ್ಪತ್ರೆಯಲ್ಲಿ ಸೌಲಭ್ಯ ಸೇರಿದಂತೆ ಇತರೆ ಯೋಜನೆಯನ್ನು ಜಾರಿಗೆ ತರುವುದಾಗಿ ತಮ್ಮ ಪ್ರಣಾಳಿಕೆಯ ಉದ್ದೇಶವನ್ನು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿ ಕೆಎಂಎಫ್ ನಷ್ಟ ಹೊಂದಿ ಹಾಲು ಮಾರಾಟ ಮಾಡುವ ಶಕ್ತಿ ಇಲ್ಲದೆ ಕ್ಷಿರಭಾಗ್ಯ ಜಾರಿಗೆ ತಂದಿದೆ. ಹೆಚ್.ಡಿ. ರೇವಣ್ಣ ಕೆಎಂಎಫ್ ಅಧ್ಯಕ್ಷರಾದಾಗ ಹಾಲು ಮಾರಾಟ ಉತ್ತಮವಾಗಿಯೇ ನಡೆಯುತಿತ್ತು ಎಂದು ಇದೆ ವೇಳೆ ಉದಾಹರಣೆ ಕೊಟ್ಟರು.
ಈ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಶಾಸಕ ಹೆಚ್.ಎಸ್. ಪ್ರಕಾಶ್, ಹೆಚ್.ಸಿ. ಬಾಲಕೃಷ್ಣ, ಹೆಚ್.ಕೆ. ಕುಮಾರಸ್ವಾಮಿ, ಬೇಲೂರು ಜೆಡಿಎಸ್ ಮುಖಂಡ ತೋ.ಚ. ಅನಂತಸುಬ್ಬರಾಯ್, ಜೆಡಿಎಸ್ ಅಧ್ಯಕ್ಷ ಲಿಂಗೇಶ್, ನಗರಸಭೆ ಅಧ್ಯಕ್ಷ ಹೆಚ್.ಎಸ್. ಅನೀಲ್ ಕುಮಾರ್, ಉಪಾಧ್ಯಕ್ಷೆ ಲೀಲಾವತಿ, ಮಾಜಿ ಅಧ್ಯಕ್ಷ ಚನ್ನವೀರಪ್ಪ, ಸಿ.ಆರ್. ಶಂಕರ್ ಇತರರು ಪಾಲ್ಗೊಂಡಿದ್ದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜೆಡಿಎಸ್ ಸಮಾವೇಶದ ಮೊದಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬೃಹತ್ ಕೇಕ್ ಕತ್ತರಿಸಿ ಆಚರಿಸಿದರು. ನಂತರ ಅಭಿಮಾನಿಗಳು ದೊಡ್ಡ ಹೂವಿನ ಹಾರವನ್ನು ಹಾಕಿ ಗೌರವಿಸಿದರು.







