ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್: ಮಧುಸೂದನ್ ಮಿಸ್ತ್ರಿ

ಬೆಂಗಳೂರು, ಮಾ.8: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ಕಾಂಗ್ರೆಸ್ ಚುನಾವಣಾ ಪರಿಶೀಲನಾ ಸಮಿತಿ(ಸ್ಕ್ರೀನಿಂಗ್ ಕಮಿಟಿ) ಅಧ್ಯಕ್ಷ ಮಧುಸೂದನ್ ಮಿಸ್ತ್ರಿ ತಿಳಿಸಿದ್ದಾರೆ.
ಗುರುವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತರಿರುವ ಆಕಾಂಕ್ಷಿಗಳ ಸಭೆಯನ್ನು ಕರೆದು, ಎಲ್ಲರಿಂದಲೂ ಮಾಹಿತಿಗಳನ್ನು ಪಡೆದಿದ್ದೇವೆ ಎಂದರು.
ಒಬ್ಬರಿಗೆ ಒಂದೇ ಟಿಕೆಟ್ ನೀಡಲಾಗುವುದು. ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಒಬ್ಬರೆ ಸ್ಪರ್ಧಿಸಲು ಟಿಕೆಟ್ ನೀಡುವುದಿಲ್ಲ. ಗೆಲ್ಲುವ ಸಾಮರ್ಥ್ಯವಿದ್ದರೆ ಒಂದು ಕುಟುಂಬದಿಂದ ಎರಡು ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
ಆಸಕ್ತರಿಂದ ಅರ್ಜಿಗಳನ್ನು ಪಡೆದುಕೊಳ್ಳುತ್ತೇವೆ. ಅವುಗಳನ್ನು ಪರಿಶೀಲನೆ ಮಾಡಿ, ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸುತ್ತೇವೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದರ ಕುರಿತು ಹೈಕಮಾಂಡ್ ಮಟ್ಟದಲ್ಲೆ ತೀರ್ಮಾನವಾಗಲಿದೆ ಎಂದು ಮಧುಸೂದನ್ ಮಿಸ್ತ್ರಿ ಹೇಳಿದರು.
ಆಕಾಂಕ್ಷಿಗಳ ಬೆವರಿಳಿಸಿದ ಮಿಸ್ತ್ರಿ: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ತಮ್ಮ ಸರಣಿ ಸವಾಲುಗಳ ಮೂಲಕ ಮಧುಸೂದನ್ ಮಿಸ್ತ್ರಿ ಬೆವರಿಳಿಸಿದ್ದಾರೆ. ಪ್ರಮುಖವಾಗಿ ಆಕಾಂಕ್ಷಿಗಳಿಗೆ ನೀವು ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ? ನಿಮ್ಮ ಕ್ಷೇತ್ರದ ಮತದಾರರ ಸಂಖ್ಯೆ ಎಷ್ಟು? ನಿಮ್ಮ ಕ್ಷೇತ್ರದ ವ್ಯಾಪ್ತಿಗೆ ಎಷ್ಟು ವಾರ್ಡುಗಳು ಬರುತ್ತವೆ? ಅವುಗಳ ಪೈಕಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸದಸ್ಯರ ಸಂಖ್ಯೆ ಎಷ್ಟು? ನೀವು ಆಕಾಂಕ್ಷಿಯಾಗಿರುವ ಕ್ಷೇತ್ರದಲ್ಲಿ ಹಾಲಿ ಇರುವ ಶಾಸಕರ ಬಗ್ಗೆ ಜನರ ಅಭಿಪ್ರಾಯವೇನು? ಹಾಲಿ ಶಾಸಕನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಪ್ರತಿಪಕ್ಷದ ಶಾಸಕರಿರುವ ಕ್ಷೇತ್ರದಲ್ಲಿ ಅವರನ್ನು ಸೋಲಿಸಲು ನಿಮ್ಮ ಬಳಿ ಇರುವ ಅಸ್ತ್ರಗಳೇನು? ಕ್ಷೇತ್ರದಲ್ಲಿನ ಜಾತಿವಾರು ಸಮೀಕರಣ ಹೇಗಿದೆ? ಯಾವ ಜಾತಿಯ ಎಷ್ಟು ಮತದಾರರಿದ್ದಾರೆ? ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಜಾತಿ ಯಾವುದು?
ಪ್ರತಿಪಕ್ಷಗಳ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರದ ಆಕಾಂಕ್ಷಿಗಳಿಗೆ ಕಾಂಗ್ರೆಸ್ ಪಕ್ಷದಿಂದ ನೀವೇ ಉತ್ತಮ ಅಭ್ಯರ್ಥಿ ಹೇಗೇ? ಈ ಹಿಂದೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಸೋಲಲು ಕಾರಣವೇನು? ಎಷ್ಟು ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ? ಸೇರಿದಂತೆ ಸಾಲು ಸಾಲು ಪ್ರಶ್ನೆಗಳನ್ನು ತನಿಖಾ ಸಂಸ್ಥೆಗಳು ನಡೆಸುವ ವಿಚಾರಣೆ ಮಾದರಿಯಲ್ಲಿ ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಸ್ಕ್ರೀನಿಂಗ್ ಕಮಿಟಿ ಸದಸ್ಯರಾದ ಸಾಹು, ಗೌರವ್ ಉಪಸ್ಥಿತರಿದ್ದರು.







