ಅನಂತಕುಮಾರ್ ಹೆಗಡೆ, ಶಾಸಕ ಸಿ.ಟಿ.ರವಿಗೆ ಹೈಕೋರ್ಟ್ ನೋಟಿಸ್
ಟಿಪ್ಪು ಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರ

ಬೆಂಗಳೂರು, ಮಾ.8: ಟಿಪ್ಪು ಸುಲ್ತಾನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹಾಗೂ ಶಾಸಕ ಸಿ.ಟಿ.ರವಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಆಲಂ ಪಾಷ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು, ಸಚಿವ ಅನಂತಕುಮಾರ್ ಹೆಗಡೆ ಹಾಗೂ ಶಾಸಕ ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲು ಇಂದಿರಾನಗರ ಠಾಣಾ ಪೊಲೀಸರಿಗೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ 10ನೆ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ ಎಂದು ಪೀಠಕ್ಕೆ ತಿಳಿಸಿದರು.
ಕೆಳ ನ್ಯಾಯಾಲಯ ಅರ್ಜಿ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಆಲಂ ಪಾಷ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಕೀಲರ ವಾದ ಆಲಿಸಿದ ನ್ಯಾಯಪೀಠವು ಸಚಿವ ಅನಂತಕುಮಾರ್ ಹೆಗಡೆ ಹಾಗೂ ಶಾಸಕ ಸಿ.ಟಿ.ರವಿಗೆ ನೋಟಿಸ್ ಜಾರಿಗೊಳಿಸಿತು.
16 ನೆ ಶತಮಾನದಲ್ಲಿ ಮೈಸೂರನ್ನು ಆಳಿದ ಟಿಪು ಸುಲ್ತಾನ್ ಒಬ್ಬ ಅತ್ಯಾಚಾರಿ ಮತ್ತು ಕೊಲೆಗಡುಕ ಎಂದು ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದರು. 2017ರ ನ.10 ರಂದು ನಡೆಯಲಿರುವ ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಮುದ್ರಿಸದಿರುವಂತೆಯೂ ಹೇಳಿದ್ದರು.







