ಮಹಿಳೆಯರ ಸ್ವಾತಂತ್ರ ಕಸಿದುಕೊಳ್ಳಲಾಗುತ್ತಿದೆ: ಸಚಿವೆ ಉಮಾಶ್ರೀ

ಬೆಂಗಳೂರು, ಮಾ.8: ಪುರುಷ ಪ್ರಧಾನ ಸಮಾಜದಲ್ಲಿ ಸಂಪ್ರದಾಯಗಳ ಹೆಸರಲ್ಲಿ ಮಹಿಳೆಯರ ಸ್ವಾತಂತ್ರ ಕಸಿದುಕೊಳ್ಳುವ ಪ್ರವೃತ್ತಿ ಇಂದಿಗೂ ಮುಂದುವರೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಬೇಸರ ವ್ಯಕ್ತಪಡಿಸಿದರು.
ಗುರುವಾರ ಜಲಮಂಡಳಿ ಹಾಗೂ ಮಂಡಳಿಯ ನೌಕರರ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ವಿಶೇಷ ಅಂಚೆ ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಅವರು,
ನಮ್ಮ ಸಮಾಜದಲ್ಲಿ ಮಹಿಳೆಯರನ್ನು ಸಂಬಂಧಗಳ ಹೆಸರಿನಲ್ಲಿ ಕಟ್ಟಿಹಾಕಿ ದೇವತೆಗಳ ಸಾಲಿನಲ್ಲಿಟ್ಟಿದ್ದೇವೆ ಎಂದು ಹೇಳುತ್ತಾರೆ. ಕಟಿಬದ್ಧ ಸಂಪ್ರದಾಯ ಮತ್ತು ಪದ್ದತಿಗಳಿಗೆ ಮಹಿಳೆಯರನ್ನು ಪುರುಷ ಸಮಾಜ ಬಲಿಕೊಡುತ್ತಿದೆ ಎಂದರು.
ಮಹಿಳೆಯರ ಹಕ್ಕು, ಸ್ವಾತಂತ್ರವನ್ನು ಸಮಾಜ ಕಸಿದುಕೊಳ್ಳುತ್ತಿದೆ. ಪುರುಷ ಸಮಾಜದ ಬೇಡಿಕೆ, ವಾಂಛೆಗಳ ತೀವ್ರತೆಯಿಂದ ಮಹಿಳೆಯರ ಮೇಲಿನ ದೌರ್ಜನ್ಯಗಳು ಮರುಕಳಿಸುತ್ತಿವೆ. ಈ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಾರ್ಲ್ಸ್ ಲೋಬೋ ಮಾತನಾಡಿ, ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ನಿಯಂತ್ರಿಸಲು ಸಮಾಜ ಹೋರಾಟ ರೂಪಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ಸೇರಿದಂತೆ ಪ್ರಮುಖರಿದ್ದರು.







