ಹಕ್ಕುಗಳಿಗಾಗಿ ಮಹಿಳೆಯರ ಹೋರಾಟ ನಿರಂತರ: ಉಮಾಶ್ರೀ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಂಗಳೂರು, ಮಾ. 8: ಮಹಿಳೆಯರ ಸ್ವಾತಂತ್ರವನ್ನು ಹತ್ತಿಕ್ಕುವುದು ಅನಾದಿಕಾಲದಿಂದಲೂ ಇದೆ. ಹೀಗಾಗಿ, ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಇಂದಿಗೂ ಹೋರಾಡಬೇಕಾದ ಪರಿಸ್ಥಿತಿ ಇದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಗುರುವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ‘ಪ್ರಗತಿಗಾಗಿ ಒತ್ತು ನೀಡಿ’ ಕಾರ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನಿಸಿ ಅವರು ಮಾತನಾಡಿದರು.
1975ರಲ್ಲಿ ಮಹಿಳಾ ದಿನಾಚರಣೆ ಆರಂಭ ಮಾಡಿದ್ದರ ಹಿಂದೆಯೂ ಹೋರಾಟವಿದೆ. ಅನಾದಿ ಕಾಲದಿಂದಲೂ ಹೆಣ್ಣನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳಲಾಗುತ್ತಿದೆ. ಇಂದಿಗೂ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮಹಿಳೆಯರು ಹೋರಾಟ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಮಹಿಳೆಯರು ಪರಾಧೀನತೆಯಿಂದ ಹೊರಬಂದು ಆರ್ಥಿಕವಾಗಿ ಸದೃಢರಾದಾಗ ಕುಟುಂಬಕ್ಕೆ ನೆರವಾಗಲು ಸಾಧ್ಯ. ಹೀಗಾಗಿ, ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿ, ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನು, ಹೆಣ್ಣು ಮಕ್ಕಳ ಬೆಳವಣಿಗೆಗ ಪೂರಕವಾಗುವಂತೆ ‘ಮಹಿಳಾ ನೀತಿ’ ಜಾರಿಗೆತಂದ ದೇಶದ ಎರಡನೆ ರಾಜ್ಯವಾಗಿದೆ ಎಂದು ನುಡಿದರು.
ಈ ವೇಳೆ ಕರ್ಮಿಣಿ ಸೌಧಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಉತ್ಪನ್ನಗಳು ಹಾಗೂ ಆದಾಯ, ಸಾಧನೆಯ ‘ಅಂತರಾಳ’ ಪುಸ್ತಕ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ, ಮಕ್ಕಳ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಸೇರಿದಂತೆ ಪ್ರಮುಖರಿದ್ದರು.
* ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಚಿಕಿತ್ಸೆ ನೀಡಲು ರಾಜ್ಯದ 174 ತಾಲೂಕುಗಳಲ್ಲಿಯೂ ‘ಗೆಳತಿ’ ಆರೋಗ್ಯ ಕೇಂದ್ರ ತೆರೆಯಲಾಗುವುದು.
* ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತ ಯುವತಿಯರಿಗೆ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆಗಾಗಿ ಸರಕಾರದಿಂದ 20 ಲಕ್ಷರೂ. ಸಹಾಯಧನ ನೀಡಲಾಗುವುದು.
-ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ..
ಕಿತ್ತೂರುರಾಣಿ ಚನ್ನಮ್ಮ ಪ್ರಶಸ್ತಿ
ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ಸಂಸ್ಥೆಗಳು: ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ-ರಾಮನಗರ ಜಿಲ್ಲೆ, ಶ್ರೀ ಗುರುಮಾತೆಯರ ಮಹಿಳಾ ಸೌಹಾರ್ದ ಸಹಕಾರಿ ನಿಗಮ- ವಿಜಯಪುರ ಜಿಲ್ಲೆ, ಸಾಧನಾ ವನಿತಾ ಮಂಡಳಿ- ಬೇಂಗಳೂರು ನಗರ ಜಿಲ್ಲೆ, ಓಂಶ್ರೀ ಸಾಯಿಟ್ರಸ್ಟ್ ಮೈಸೂರು ಜಿಲ್ಲೆ, ಶ್ರೀ ಅಂಬಿಕ ಮಹಿಳಾ ಮಂಡಳಿ -ಮಂಡ್ಯ ಜಿಲ್ಲೆ, ವಿಶ್ವ ಬಂಧು ಸೇವಾಸಂಸ್ಥೆ- ಧಾರವಾಡ ಜಿಲ್ಲೆ.
ಮಹಿಳಾ ಅಭಿವೃದ್ಧಿಗಾಗಿ ಶ್ರಮಿಸಿದ ಉತ್ತಮ ವ್ಯಕ್ತಿ: ಸಲ್ಮಾ ತಾಜ್(ಕಿತ್ತೂರು ರಾಣಿ ಮಹಿಳಾ ಸಂಘ), ಸನುಷಾ ಎನ್.ಆರ್.ರಮೇಶ್(ಸಾಯಿ ಚೈತನ್ಯ ಚಾರಿಟಬಲ್ ಟ್ರಸ್ಟ್), ಕೆ.ಎನ್.ಸವಿತಾರಾಮು, ಎಚ್.ಆರ್.ಶಾಲಿನಿ, ರಚನಾ ಮಹೇಶ್, ಕೆ.ಪಿ.ಅರುಣಕುಮಾರಿ, ಲಕ್ಷ್ಮಿ ಡಿ.ಗೌಡರ, ನಂದಾದೇವಿ.
ಸಾಹಿತ್ಯ ಕ್ಷೇತ್ರ: ಪಿ.ಕುಸುಮ ಅಯರಹಳ್ಳಿ, ಇಂದಿರಾ ಕೃಷ್ಣಪ್ಪ, ಶಶಿಕಲಾ ವಸ್ತ್ರದ
ಕಲಾಕ್ಷೇತ್ರ: ಅನುಸೂಯ ಕುಲಕರ್ಣಿ, ಮಾಲತಿ ಸುಧೀರ್, ಪದ್ಮ ಹೇಮಂತ್, ಲಕ್ಷ್ಮಿದೇವಮ್ಮ, ಪದ್ಮಜಾ ಜಯರಾಂ.
ಕ್ರೀಡಾ ಕ್ಷೇತ್ರ: ಲಲಿತಾ ಲಮಾಣಿ, ರತ್ನಮ್ಮ.
ಶಿಕ್ಷಣ ಕ್ಷೇತ್ರ: ಸುವರ್ಣ ಲತಾ ಜಿ. ಗದ್ದಿಗೆಪ್ಪ ಗೌಡ(ವಿದ್ಯಾನಿಕೇತನ ಸಮೂಹ ಸಂಸ್ಥೆ),
ವೀರ ಮಹಿಳೆ ಪ್ರಶಸ್ತಿ: ಶಾಲಿನಿ ಸರಸ್ವತಿ







